ಕಲಬುರಗಿ,ಜೂ.7: ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಬೆಂಗಳೂರಿನ ಟೌನ್ ಹಾಲ್‍ನಲ್ಲಿ ಜೂನ್ 9ರಂದು ಬೆಳಿಗ್ಗೆ 10 ಗಂಟೆಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಭೀಮ ಸಂಕಲ್ಪ ಸಮಾವೇಶ ಹಾಗೂ ಪ್ರಜಾಪ್ರಭುತ್ವ ಮರು ಸ್ಥಾಪನೆಗೆ ಶ್ರಮಿಸಿದ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಡಾ. ಡಿ.ಜಿ. ಸಾಗರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸ್ಪೂರ್ತಿ ದಾಮದ ಎಸ್. ಮರಿಸ್ವಾಮಿ ಅವರು ವಹಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಪ್ರಿಯಾಂಕ್ ಖರ್ಗೆ, ವಸತಿ ಸಚಿವ ಜಮೀರ್ ಅಹ್ಮದ್‍ಖಾನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಆಗಮಿಸುವರು ಎಂದು ಅವರು ಹೇಳಿದರು.
ಸಮಿತಿಯ ಮಾವಳ್ಳಿ ಶಂಕರ್, ಗುರುಪ್ರಸಾದ್ ಕರಗೋಡು, ವಿ. ನಾಗರಾಜ್, ಎನ್. ವೆಂಕಟೇಶ್, ಲಕ್ಷ್ಮೀನಾರಾಯಣ್ ನಾಗವಾರ್, ಅಣ್ಣಯ್ಯ, ಅರ್ಜುನ್ ಭದ್ರೆ, ಎನ್. ಮುನಿಸ್ವಾಮಿ, ಎಂ. ಸೋಮಶೇಖರ್, ಜಗಣಿ ಶಂಕರ್, ಎಸ್.ಆರ್. ಕೊಲ್ಲೂರ್ ಅವರು ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದ ಅವರು, ಬೆಂಗಳೂರಿನಲ್ಲಿ ಸಮಾವೇಶ ಸಂಘಟಿಸಿದ ಬಳಿಕ ರಾಜ್ಯದ ನಾಲ್ಕು ವಿಭಾಗಗಳಲ್ಲಿಯೂ ಸಹ ಸಮಾವೇಶ ಸಂಘಟಿಸಲು ಚಿಂತನೆ ನಡೆದಿದೆ. ಬೆಂಗಳೂರಿನಲ್ಲಿನ ಸಮಾವೇಶಕ್ಕೆ ಸುಮಾರು 3000 ಜನರು ಪಾಲ್ಗೊಳ್ಳುವರು ಎಂದರು.
ಭ್ರಷ್ಟಾಚಾರ, ದೌರ್ಜನ್ಯ, ಜಾತಿ ವಿರೋಧಿ ನೀತಿಗಳಿಂದ ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದ ಜನರು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿದ್ದು, ನಮ್ಮ ದಲಿತ ಸಮುದಾಯದವರು ಸಹ ಎಲ್ಲ ಕಡೆ ಕಾಂಗ್ರೆಸ್ ಪರ ಪ್ರಚಾರ ಮಾಡಿ ಮತ ಚಲಾಯಿಸಿರುವ ಪರಿಣಾಮ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಉತ್ತಮ ಆಡಳಿತ ನೀಡಬೇಕು. ತಪ್ಪು ಮಾಡಿದರೆ ಸರ್ಕಾರದ ವಿರುದ್ಧ ರಸ್ತೆಗಿಳಿದು ಹೋರಾಟ ರೂಪಿಸುವುದಾಗಿ ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಆರ್. ಕೊಲ್ಲೂರ್, ಎಸ್.ಪಿ. ಸುಳ್ಳದ್ ಅರ್ಜುನ್ ಭದ್ರೆ, ಸುರೇಶ್ ಹಾದಿಮನಿ, ಅರ್ಜುನ್ ಗೊಬ್ಬೂರ್, ಮಹಾದೇವ್ ಕೋಳಕೂರ್ ಮುಂತಾದವರು ಉಪಸ್ಥಿತರಿದ್ದರು.