ಬೆಂಗಳೂರಿನಲ್ಲಿ ಕೊರೊನಾ ರುದ್ರನರ್ತನ

ಬೆಂಗಳೂರು, ಏ.೨೫-ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆಯ ರುದ್ರ ತಾಂಡವ ಮುಂದುವರಿದಿದ್ದು, ಭಾನುವಾರ ಮಧ್ಯಾಹ್ನ ವೇಳೆಗೆ ೨೦,೯೨೫ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಬರೀ ಒಂದೇ ದಿನದಲ್ಲಿ ೨೦ ಸಾವಿರದ ಗಡಿ ದಾಟಿರುವುದಕ್ಕೆ ರಾಜಧಾನಿ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ದಿನದಿಂದ ದಿನಕ್ಕೆ ಮೂರರಿಂದ ನಾಲ್ಕು ಸಾವಿರ ಪ್ರಕರಣಗಳ ಹೆಚ್ಚಳ ತೀವ್ರ ಭೀತಿಗೆ ಒಳಗಾಗುವಂತೆ ಮಾಡಿದೆ.

ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, ೩,೦೯೭ ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಬೆಂಗಳೂರು ಪೂರ್ವ ವಲಯದಲ್ಲಿ ೩,೫೭೧, ಬೊಮ್ಮನಹಳ್ಳಿಯಲ್ಲಿ ೨,೨೭೧, ಮಹಾದೇವಪುರದಲ್ಲಿ ೨,೪೯೮. ಅದೇ ರೀತಿ, ಬೆಂಗಳೂರು ಪಶ್ಚಿಮ ವಲಯದಲ್ಲಿ ೨,೩೬೩, ಆರ್.ಆರ್.ನಗರದಲ್ಲಿ ೧,೪೧೩, ಯಲಹಂಕದಲ್ಲಿ ೧,೬೧೯, ದಾಸರಹಳ್ಳಿದಲ್ಲಿ ೫೬೯ ಬೆಂಗಳೂರು ಹೊರವಲಯದಲ್ಲಿ ೧,೭೬೩ ಸೋಂಕಿತರು ಪತ್ತೆಯಾಗಿದ್ದಾರೆ.

ಪ್ರತಿ ಚದರಕ್ಕೂ ಸೋಂಕಿತರು: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಚದರ ಕಿ.ಮೀಗೆ ೩೦೦ ಕೋವಿಡ್-೧೯ ಪ್ರಕರಣಗಳಿವೆ. ಕಳೆದ ೨೪ ಗಂಟೆಗಳಲ್ಲಿ ಬೆಂಗಳೂರು ಒಂದರಲ್ಲಿಯೇ ೧೭,೩೪೨ ಹೊಸ ಕೋವಿಡ್-೧೯ ಪ್ರಕರಣಗಳು, ೧೪೯ ಸಾವು ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಶುಕ್ರವಾರದವರೆಗೂ ಸಕ್ರಿಯ ಪ್ರಕರಣಗಳ ಸಂಖ್ಯೆ ೨ ಲಕ್ಷ ಗಡಿ ದಾಟಿದ್ದು, ಜೀವನ್ ರಕ್ಷಾ ಯೋಜನೆ ಪ್ರಕಾರ ಕೋವಿಡ್-೧೯ ರೋಗಿಗಳ ಪ್ರಾದೇಶಿಕ ಸಾಂದ್ರತೆ ಪ್ರಕಾರ, ಬೆಂಗಳೂರಿನಲ್ಲಿ ಪ್ರತಿ ಚದರ ಕಿ.ಮೀಗೆ ೩೦೦ ಕೋವಿಡ್-೧೯ ರೋಗಿಗಳಿದ್ದಾರೆ.

ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜನಸಾಂದ್ರತೆ ಹೆಚ್ಚಿರುವ ನಗರಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಿದೆ.ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯದ ಕೋವಿಡ್-೧೯ ಪ್ರಕರಣಗಳಲ್ಲಿ ಬೆಂಗಳೂರು ಒಂದರಲ್ಲಿಯೇ ಸುಮಾರು ಶೇ.೫೦ ರಷ್ಟು ಪ್ರಕರಣಗಳಿವೆ ಎಂದು ಜೀವನ್ ರಕ್ಷಾ ಯೋಜನಾಧಿಕಾರಿ ಮೈಸೂರು ಸಂಜೀವ್ ಹೇಳಿದ್ದಾರೆ

ರಾಜ್ಯ ಸರ್ಕಾರದಿಂದ ನಡೆಸಿರುವ ಆಧಾರ್ ನೋಂದಣಿ ಪ್ರಕಾರ ಬೆಂಗಳೂರು ೨.೧೯೬ ಚದರ ಕಿಲೋ ಮೀಟರ್ ಭೂ ಪ್ರದೇಶವಿದ್ದು, ೧,೦೬,೪೦,೦೬೪ ಜನಸಂಖ್ಯೆಯನ್ನು ಹೊಂದಿದೆ.

ಬೆಂಗಳೂರಿನಲ್ಲಿ ಜನಸಾಂದ್ರತೆ ಹೆಚ್ಚಿರುವ ಕಾರಣಕ್ಕೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಪಾಸಿಟಿವಿಟಿ ದರ ಶೇ.೨೦ ರಷ್ಟಿರುವುದಕ್ಕೆ ಜನಸಾಂದ್ರತೆಯೇ ಕಾರಣ ಎಂದು ರಾಜ್ಯ ಕೋವಿಡ್-೧೯ ಟೆಸ್ಟಿಂಗ್ ನೋಡಲ್ ಅಧಿಕಾರಿ ಡಾ.ಸಿ.ಎನ್, ಮಂಜುನಾಥ್ ಮಾಹಿತಿ ಹಂಚಿಕೊಂಡಿದ್ದಾರೆ.