ಬೆಂಗಳೂರಿನಲ್ಲಿ ಕೆಟ್ಟು ನಿಂತ ಆಟೋದಲ್ಲಿ 1ಕೋಟಿ ಪತ್ತೆ ಅಕ್ರಮ ಶಂಕೆ

ಬೆಂಗಳೂರು, ಏ.13- ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಅಕ್ರಮ ನಗದು, ಉಡುಗೊರೆ ಸಾಗಾಟದ ಬಗ್ಗೆ ಹದ್ದಿನ ಕಣ್ಣಿಟ್ಟು ತಪಾಸಣೆ ನಡೆಸುತ್ತಿದ್ದು,ನಗರದ ಎಸ್‌.ಜೆ.ಪಾರ್ಕ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಟ್ಟು ನಿಂತಿದ್ದ ಆಟೋ ಒಂದರಲ್ಲಿ 1 ಕೋಟಿ ರೂ ನಗದು ಪತ್ತೆಯಾಗಿದೆ.
ಈ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಪೊಲೀಸರು ಜಪ್ತಿ ಮಾಡಿದ್ದಾರೆ.ಸುರೇಶ್‌, ಪ್ರವೀಣ್‌ ಎಂಬವರು ಆಟೋದಲ್ಲಿ 1 ಕೋಟಿ ರೂ ನಗದು ಸಾಗಿಸುತ್ತಿದ್ದಾಗ ಆಟೋ ಕೆಟ್ಟು ನಿಂತಿತ್ತು. ಅನುಮಾನಾಸ್ಪದವಾಗಿ ಕಂಡುಬಂದ ಆಟೋವನ್ನು ಪರಿಶೀಲಿಸಿದಾಗ 1 ಕೋಟಿ ರೂ. ನಗದು ಪತ್ತೆಯಾಗಿದೆ. ನಗದಿಗೆ ಸಂಬಂಧಪಟ್ಟ ದಾಖಲೆಗಳು ಇರಲಿಲ್ಲ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸ್ ಠಾಣೆಗೆ ಐಟಿ ಇಲಾಖೆ ಅಧಿಕಾರಿಗಳೂ ಭೇಟಿ ನೀಡಿದ್ದು ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ತಮ್ಮ ಬಳಿ ಇದ್ದ ನಗದು ರಾಜೇಶ್‌ ಎಂಟರ್‌ಪ್ರೈಸಸ್‌ಗೆ ಸೇರಿದ್ದು ಎಂದು ಆರೋಪಿಗಳು ಹೇಳಿದ್ದಾರೆ. ವಿಜಯನಗರದಿಂದ ಜಯನಗರಕ್ಕೆ ಸಾಗಿಸಲಾಗುತ್ತಿತ್ತು ಎಂದೂ ತಿಳಿಸಿದ್ದಾರೆ.