ಬೆಂಗಳೂರಿನಲ್ಲಿ ಓಡಾಡಲು ಎರಡು ಡೋಸ್ ಕಡ್ಡಾಯ

ಬೆಂಗಳೂರು, ಡಿ.1-ನಗರದಲ್ಲಿ ಕೋವಿಡ್ ರೂಪಾಂತರ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಬಿಬಿಎಂಪಿ, ನಗರದ ಉದ್ಯಾನ, ಚಿತ್ರಮಂದಿರ, ಮಾಲ್ ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಿಗೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಲು ಮುಂದಾಗಿದೆ.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ಗೌರವ್ ಗುಪ್ತ, ಕೋವಿಡ್ ರೂಪಾಂತರಿ ವೈರಾಣುವಿನಿಂದ ವಿಶ್ವದಾದ್ಯಂತ ಸಾಕಷ್ಟು ಬದಲಾವಣೆಗಳಾಗುತ್ತಿದೆ.

ನಗರದಲ್ಲಿ ಕೋವಿಡ್ ರೂಪಾಂತರಿಯನ್ನು ನಿಯಂತ್ರಿಸಲು ಯಾವ ರೀತಿ ಕಾರ್ಯೋನ್ಮುಖರಾಬೇಕು, ಯಾವೆಲ್ಲಾ ಬದಲಾವಣೆ ಮಾಡಬೇಕು ಎಂಬ ವಿಷಯಗಳ ಬಗ್ಗೆ ತಜ್ಞರು ಹಲವು ಸಲಹೆ,
ಸೂಚನೆಗಳನ್ನು ನೀಡಲಾಗಿದೆ ಎಂದರು.

ಪ್ರಮುಖವಾಗಿ ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟಿಂಗ್ ಮಾಡುವುದು, ಕ್ವಾರಂಟೈನ್ ಮಾಡುವುದು, ಸಂಗ್ರಹಿಸಿರುವ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸುವುದು‌.ನಗರದಲ್ಲಿರುವ ಕಂಟೈನ್ಮೆಂಟ್ ಜೋನ್ ಗಳ ಮೇಲೆ ನಿಗಾವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಕ್ಲಸ್ಟರ್ ಗಳಾದರೆ ಅದರ ಮೇಲೆ ಹೆಚ್ಚು ಗಮನ ಹರಿಸುವುದು. ಸಭೆ-ಸಮಾರಂಭಗಳು, ಪಾರ್ಟಿ, ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಿ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುವುದು.

ಅವಶ್ಯಕತೆ ಬಿದ್ದಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸುವುದು. ಹೊಸದಾಗಿ ಬಂದಿರುವ ಓಮೈಕ್ರಾನ್ ಹಾಗೂ ಇನ್ನಿತರೆ ವೈರಾಣು ಹರಡದಂತೆ ಪೂರ್ವ ಸಿದ್ದತೆ ಮಾಡಿಕೊಳ್ಳುವುದು. ಶಾಲೆಗಳಲ್ಲಿ ಕನಿಷ್ಠ ತಿಂಗಳಿಗೊಮ್ಮೆ ಶೇ.10 ರಷ್ಟು ಮಕ್ಕಳಿಗೆ ಪರೀಕ್ಷೆ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಲಾಗಿದೆ ಎಂದರು‌.