ಬೆಂಗಳೂರಿನಲ್ಲಿ ಏಕಾಏಕಿ ಕಾಣಿಸಿಕೊಂಡ ರಸ್ತೆ ಗುಂಡಿ..!

ಬೆಂಗಳೂರು, ಜ.12- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕಳಪೆ ಕಾಮಗಾರಿ ಬೆಳಕಿಗೆ ಬಂದಿದ್ದು, ಇಲ್ಲಿನ ಜಾನ್ಸನ್ ಮಾರ್ಕೆಟ್ ರಸ್ತೆಯಲ್ಲಿ ಏಕಾಏಕಿ ವೃತಾಕಾರದ ಗುಂಡಿ ಬಾಯ್ತೆರೆದಿದ್ದು, ಬೈಕ್ ಸವಾರನಿಗೆ ಗಾಯವಾಗಿದೆ.

ಗುರುವಾರ ಅಶೋಕನಗರ ಸಂಚಾರ ಠಾಣಾ ವ್ಯಾಪ್ತಿಯ ಜಾನ್ಸನ್ ಮಾರ್ಕೆಟ್ ರಸ್ತೆಯಲ್ಲಿ ಏಕಾಏಕಿ ಸುಮಾರು ಎರಡು ಅಡಿ ಆಳದ ರಸ್ತೆ ಗುಂಡಿ ತೆರೆದಿದ್ದು, ಇದೇ ದಾರಿಯಲ್ಲಿ ಬರುತ್ತಿದ್ದ ಬೈಕ್ ಸವಾರ ಬಿದ್ದು ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆ ಸೇರಿಸಲಾಗಿದೆ.

ಮಾಹಿತಿ ಹಿನ್ನೆಲೆ ಡಿಸಿಪಿ ಕಲಾ ಕೃಷ್ಣಕುಮಾರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ‌. ಏಕಾಏಕಿ ರಸ್ತೆ ಗುಂಡಿ ಉದ್ಬವಿಸಿದ್ದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ.

ಇನ್ನೂ, ಆಡುಗೋಡಿಯಿಂದ ಶಿವಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ‌. ಇಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ರಸ್ತೆ ಮಧ್ಯಭಾಗದಲ್ಲಿ ಮಣ್ಣು ಕುಸಿದಿದೆ ಎಂದು ಹೇಳಲಾಗುತ್ತಿದೆ.