ಕಲಬುರಗಿ,ಜು.8:ಬೆಂಗಳೂರಿನ ಶ್ರೀ ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಸುಮಾರು 10,846 ಚದುರ ಅಡಿ ಅಳತೆಯ ಸಿಎ ನಿವೇಶನದಲ್ಲಿ ಆರ್ಯ ಈಡಿಗರ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಆರ್ಯ ಈಡಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಹೆಚ್.ಟಿ. ಮೋಹನದಾಸ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಮಾರು 1.52 ಕೋಟಿ ರೂ.ಗಳನ್ನು ಪಾವತಿಸಿ ಸಂಘಕ್ಕೆ ಮಂಜೂರು ಮಾಡಿಸಲಾಗಿದೆ. ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಸದರಿ ನಿವೇಶನವನ್ನು ಸಂಘದ ಹೆಸರಿಗೆ ನೊಂದಣಿ ಮಾಡಿಸಲಾಗಿದೆ ಎಂದರು.
ಸದರಿ ನಿವೇಶನದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ಅಡಿಪಾಯ ಕಾರ್ಯಕ್ರಮವನ್ನು ಶೀಘ್ರ ನೆರವೇರಿಸಲಾಗುವುದು. ಸಮಾಜದ ಅಭಿವೃದ್ಧಿ ಒಬ್ಬರಿಂದ ಮಾಡಲು ಸಾಧ್ಯವಿಲ್ಲ. ಸಮಾಜಬಾಂಧವರು ತಮ್ಮ ಶಕ್ಯಾನುಸಾರ ನೀಡಿದ ದೇಣಿಗೆಯಿಂದ ಸತ್ಕಾರ್ಯ ಕೈಗೊಳ್ಳಲು ಸಾಧ್ಯವಾಗಿದೆ. ಆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಿ ಸಮಾಜಕ್ಕೆ ಅನುಕೂಲಕ್ಕೆ ಸಮರ್ಪಣೆ ಮಾಡಿದಲ್ಲಿ ನಮ್ಮೆಲ್ಲರ ಶ್ರಮ ಸಾರ್ಥಕ ಎಂದು ಅವರು ಹೇಳಿದರು.
ರಾಜ್ಯದ ಜನಸಂಖ್ಯೆಯಲ್ಲಿ 6ನೇ ಸ್ಥಾನ, ಹಿಂದುಳಿದ ವರ್ಗಗಳ ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಆರ್ಯ ಈಡಿಗ ಹಾಗೂ 25 ಪಂಗಡಗಳು ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಕ್ಷೀಣಿಸುತ್ತಿರುವ ಇಂತಹ ಸಂದರ್ಭದಲ್ಲಿ ಸಮಾಜವನ್ನು ಮತ್ತೆ ಪುನರ್ ನಿರ್ಮಾಣ ಮಾಡುವ ಸಲುವಾಗಿ ಇಡೀ ರಾಜ್ಯ ಪ್ರವಾಸ ಮಾಡಿ ಸ್ಥಳೀಯ ಸಮಾಜದ ಮುಖಂಡರು ಹಾಗೂ ರಾಜಕೀಯ ಮುಖಂಡರೊಂದಿಗೆ ಚರ್ಚಿಸಲು ಜಿಲ್ಲಾ ಕೇಂದ್ರದಲ್ಲಿ ಸಂಘದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಧಾರವಾಡದ ಸುತ್ತೂರು ಬಡಾವಣೆಯಲ್ಲಿರುವ ಸಂಘದ ಸುಮಾರು 64000 ಚದುರ ಅಡಿ ಅಳತೆಯ ನಿವೇಶನದಲ್ಲಿ ಈಗಾಗಲೇ ವಿದ್ಯಾ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಕಾರ್ಯೋನ್ಮುಖವಾಗಿದೆ. ಇಲ್ಲಿ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದೆ. ಧಾರವಾಡದ ಸುತ್ತಮುತ್ತಲಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಯೋಜನೆಯಿದೆ ಎಂದು ಅವರು ಹೇಳಿದರು.
ಅದೇ ರೀತಿ ಚಿಕ್ಕಬಳ್ಳಾಪುರ, ಮೈಸೂರು, ಚಿಕ್ಕಮಗಳೂರಿನಲ್ಲಿಯೂ ಸಹ ಇಂತಹ ಪ್ರಯತ್ನ ನಡೆಯುತ್ತಿದೆ. ಹಂತ, ಹಂತವಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿಯೂ ಸಹ ಸಂಘದಿಂದ ಶಾಖೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿಯೂ ಸಹ ಇದೇ ರೀತಿ ಜಾಗದ ವ್ಯವಸ್ಥೆಯಾದರೆ ಸಂಘದ ವತಿಯಿಂದ ಶಾಲಾ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರಿನ ಆರ್ಯ ಈಡಿಗ ಮಹಾ ಸಂಸ್ಥಾನದ ಆವರಣದಲ್ಲಿ ವಿವಿಧ ತರಬೇತಿ ಕೇಂದ್ರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಲು ತೀರ್ಮಾನಿಸಿದ್ದು, ಅದಕ್ಕೆ ಹೆಚ್ಚುವರಿ ಹತ್ತು ಎಕರೆ ಸ್ಥಳಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಕೇಂದ್ರ ಸಂಘದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯವನ್ನು ನವೀಕರಿಸಿ ನೆಲಮಹಡಿಯಲ್ಲಿ ವಾಣಿಜ್ಯ ಮಳಿಗೆ ಹಾಗೂ ಮೊದಲನೇ ಮತ್ತು ಎರಡನೇ ಮಹಡಿಯಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ನಿರ್ಮಿಸಿ ಸಮಾಜದ ಬಡ ಮಕ್ಕಳಿಗೆ ಉಚಿತ ಪ್ರವೇಶ ಮತ್ತು ಸೌಕರ್ಯಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.
ಈಡಿಗ ಹಾಗೂ 25 ಪಂಗಡಗಳ ಆಚಾರ, ವಿಚಾರ, ಶಾಸ್ತ್ರ, ಕುಲಕಸುಬು ಇತ್ಯಾದಿಗಳ ಕುರಿತಾಗಿ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ. ಆ ನಿಟ್ಟಿನಲ್ಲಿ ಸಂಘವು ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ಒಗ್ಗಟ್ಟಿನಿಂದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಸತೀಶ್ ಗುತ್ತೇದಾರ್ ಮುಂತಾದವರು ಉಪಸ್ಥಿತರಿದ್ದರು.