ಬೆಂಗಳೂರಿನಲ್ಲಿ ಅಲಿಕಲ್ಲು ಸಹಿತ ಭಾರೀ‌ ಮಳೆ; ಅಂಡರ್ ಪಾಸ್ ನಲ್ಲಿ ಮುಳುಗಿದ ಕಾರು, ಮಹಿಳೆ ಸಾವು ಮೂವರ ರಕ್ಷಣೆ

ಬೆಂಗಳೂರು,ಮೇ 21- ನಗರದ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು, ಜಲಾವೃತಗೊಂಡ ಕೆಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಮುಳುಗಡೆಯಾದ ಕಾರಿನಲ್ಲಿದ್ದ ಮೂವರನ್ನು ರಕ್ಷಣೆ ಮಾಡಲಾಗಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ವಿಧಾನಸೌಧದಿಂದ 200 ಮೀಟರ್ ದೂರದಲ್ಲೇ ಇರುವ ಕೆ.ಆರ್. ವೃತ್ತದ ಬಳಿಯಿರುವ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಕಾರು ಸಿಲುಕಿಕೊಂಡು ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯುವತಿಯನ್ನು ಭಾನುರೇಖಾ (22) ಎಂದು ಗುರುತಿಸಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ 6 ಜನರ ಕುಟುಂಬ ಬೆಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು. ಬೆಂಗಳೂರಿನ ರಸ್ತೆಗಳ ಪರಿಚಯ ಇಲ್ಲದ್ದರಿಂದ ಮಳೆಯ ನಡುವೆಯೇ ಗೂಗಲ್‌ ಮ್ಯಾಪ್‌ ತೋರಿಸಿದಂತೆ ಅಂಡರ್‌ಪಾಸ್‌ನಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಆದರೆ, ಅಂಡರ್‌ಪಾಸ್‌ನಲ್ಲಿ ಮಳೆಯ ನೀರು ತುಂಬಿಕೊಂಡಿದ್ದು, ಅಲ್ಲಿ ಹೋದ ಕಾರು ಸಂಪೂರ್ಣ ಮುಳುಗಿದೆ.


ಅವರನ್ನು ಸ್ಥಳೀಯರು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಒಂದೇ ಕುಟುಂಬದ 5 ಮಂದಿ ಸಿಲುಕಿ ದೊಡ್ಡ ಅನಾಹುತ ಸಂಭವಿಸಿದೆ. ಕಾರಿನೊಳಗೆ ಸಿಲುಕಿದ್ದ ಕುಟುಂಬವನ್ನು ಸ್ಥಳೀಯರು ನೀರಿಗೆ ನುಗ್ಗಿ ಕಾಪಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೀರು ಕುಡಿದ ಯುವತಿ ಉಸಿರಾಟಕ್ಕೆ ಸಮಸ್ಯೆ ಎದುರಾಗಿದೆ.
ಅವರನ್ನು ಕೂಡಲೇ ಹತ್ತಿರವಿದ್ದ ಸೇಂಟ್ ಮಾರ್ಥಾಸ್‌ ಆಸ್ಪತ್ರೆಗೆ ರವಾನಿಸಲಾಗಿದೆ.  ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಮುಳುಗಿದ ಕಾರನಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಣೆ ಮಾಡುವಷ್ಟರಲ್ಲಿ ಯುವತಿ ಹಾಗೂ ವೃದ್ಧೆ ಇಬ್ಬರೂ ನೀರು ಕುಡಿದು ಉಸಿರಾಟ ಸಮಸ್ಯೆ ಅನುಭವಿಸುತ್ತಿದ್ದರು. ಅವರನ್ನು ಕೂಡಲೇ ಹತ್ತಿರದಲ್ಲೇ ಇದ್ದ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಆಸ್ಪತ್ರೆ ಸಿಬ್ಬಂದಿ ಯುವತಿ ಸ್ಥಿತಿ ಗಂಭೀರವಾಗಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ನಿರಾಕರಣೆ ಮಾಡಿದ್ದಾಎ. ನಂತರ, ಸರ್ಕಾರಿ ಅಧಿಕಾರಿಗಳು ಬಂದು ಸೂಚನೆ ನೀಡಿದ ನಂತರ ಅವರನ್ನು ಆಸ್ಪತ್ರೆಯೊಳಗೆ ಕರೆದುಕೊಮಡು ಹೋಗಲಾಗಿದೆ. ಆದರೂ ಆಸ್ಪತ್ರೆಯೊಳಗೆ ಇದ್ದ ವೈದ್ಯರು ಚಿಕಿತ್ಸೆ ನೀಡಲು ನಿರಾಕರಣೆ ಮಾಡಿ ಸತಾಯಿಸಿದ್ದಾರೆ. ಈ ಪ್ರಕರಣ ಗಂಭೀರವಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯರಿಗೆ ಸೂಚನೆ ನೀಡಿದ ನಂತರ ಯುವತಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಿ ಯುವತಿ ಸ್ಥಿತಿ ಗಂಭೀರವಾಗಿದ್ದು ಪ್ರಾಣಬಿಟ್ಟಿದ್ದಾಳೆ ಎಂದು ಯುವತಿ ಪೋಷಕರು ತಿಳಿಸಿದ್ದಾರೆ. 


ಇನ್ನು ಭಾರಿ ಮಳೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಮುಂಭಾಗದಲ್ಲಿ ಕಾರು, ಬೈಕ್ ಮೇಲೆ ಬೃಹತ್ ಮರ ಬಿದ್ದಿದ್ದು, ಕುಮಾರ ಕೃಪಾ ರಸ್ತೆಯನ್ನು ಬಂದ್ ಮಾಡಲಾಗಿದೆ.
ಮೆಜಸ್ಟಿಕ್, ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ, ನಾಗರಭಾವಿ, ಕಾಮಾಕ್ಷಿ ಪಾಳ್ಯ, ಗಿರಿನಗರ, ಜಯನಗರ, ವಿಜಯನಗರ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ, ಶೇಷಾದ್ರಿಪುರಂ, ಮೇಖ್ರಿ ಸರ್ಕಲ್ ಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು ಸಣ್ಣ ಕಲ್ಲುಗಳ ರೀತಿಯಲ್ಲಿ ಅಲಿಕಲ್ಲುಗಳು ಬಿದ್ದಿವೆ.


ನೆಲಮಂಗಲ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು. ಭಾರೀ ಮಳೆಗೆ ವಾಹನ ಸವಾರರು ತತ್ತರಿಸಿ ಹೋಗಿದ್ದರು. ಅಲ್ಲದೇ ಹಲವು ಕಡೆ ಮಳೆ ಜತೆಗೆ ಜೋರು ಗಾಳಿ ಬೀಸಿದ ಪರಿಣಾಮ ಮರಗಳು ಧರೆಗುರುಳಿವೆ. ಹೀಗಾಗಿ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ರಾಯಚೂರು, ಹಾವೇರಿ, ಕೋಲಾರ, ಮೈಸೂರು, ಮಂಡ್ಯ, ಹಾಸನ, ಉಡುಪಿ, ಗೋಕಾಕ್​​, ಬೆಳಗಾವಿ, ಬೀದರ್​ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ.
ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆಯ ಬಗ್ಗೆ ಮಾಹಿತಿ ಪಡೆದಿದ್ದು, ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.