ಬೆಂಗಳೂರಿನತ್ತ ೨೨೯ ಭಾರತೀಯರು

ರಿಯಾದ್,ಏ.೩೦-ಆಪರೇಷನ್ ಕಾವೇರಿ ಮೂಲಕ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ೨೨೯ ಭಾರತೀಯರು ಬೆಂಗಳೂರಿಗೆ ತೆರಳುವ ವಿಮಾನದಲ್ಲಿ ಹೊರಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಪರೇಷನ್ ಕಾವೇರಿ ನಾಗರಿಕರನ್ನು ಮರಳಿ ಮನೆಗೆ ಕರೆತರುತ್ತಿದೆ. ೨೨೯ ಪ್ರಯಾಣಿಕರನ್ನು ಹೊತ್ತ ೭ನೇ ವಿಮಾನವು ಇದಾಗಿದ್ದು, ಜೆಡ್ಡಾದಿಂದ ಬೆಂಗಳೂರಿಗೆ ತೆರಳಲಿದೆ.
ಸುಡಾನ್‌ನಲ್ಲಿ ಕದನ ವಿರಾಮವನ್ನು ಘೋಷಿಸಿರುವುದರಿಂದ, ಭಾರತ ಸೇರಿದಂತೆ ಹಲವಾರು ದೇಶಗಳು ತಮ್ಮ ನಾಗರಿಕರನ್ನು ಸಂಘರ್ಷ-ಪೀಡಿತ ರಾಷ್ಟ್ರದಿಂದ ಸ್ಥಳಾಂತಿರಸಲು ಪ್ರಯತ್ನಿಸುತ್ತಿವೆ. ಇದಕ್ಕೂ ಮೊದಲು, ಭಾರತೀಯ ನೌಕಾಪಡೆಯ ಹಡಗು, ಐಎನ್‌ಎಸ್ ಟೆಗ್ ಶನಿವಾರ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ ೨೮೮ ಭಾರತೀಯರನ್ನು ಆಪರೇಷನ್ ಕಾವೇರಿ ಮೂಲಕ ಯಶಸ್ವಿಯಾಗಿ ಸ್ಥಳಾಂತರಿಸಿತು. ಸುಡಾನ್ ಸಂಘರ್ಷಣೆಯಲ್ಲಿ ಸಿಲುಕಿಕೊಂಡಿದ್ದ ೧೪ನೇ ತಂಡ ಇದಾಗಿದ್ದು, ಭಾರತಕ್ಕೆ ಮರಳಲು ಜೆಡ್ಡಾಕ್ಕೆ ತೆರಳಿದೆ.
ಈ ಹಿಂದೆ ಪೋರ್ಟ್ ಸುಡಾನ್‌ನಲ್ಲಿ ನೆಲೆಗೊಂಡಿದ್ದ ಐಎನ್‌ಎಸ್ ಸುಮೇಧಾ ಬಿಕ್ಕಟ್ಟಿನಿಂದಾಗಿ ೩೦೦ ಪ್ರಯಾಣಿಕರೊಂದಿಗೆ ಜೆಡ್ಡಾಕ್ಕೆ ಹೊರಟಿತ್ತು. ಆಪರೇಷನ್ ಕಾವೇರಿಯಡಿಯಲ್ಲಿ ಭಾರತ ಸರ್ಕಾರವು ಸುಮಾರು ೩,೦೦೦ ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಲು ನಿರ್ಧರಿಸಿದೆ.