ಬೆಂಗಳೂರಿಗೆ ವಾರ್ಷಿಕ ೨೪ ಟಿಎಂಸಿ ಕಾವೇರಿ ನೀರು ಮೀಸಲು ಆದೇಶ

ಬೆಂಗಳೂರು, ನ. ೮- ಬೆಂಗಳೂರು ನಗರಕ್ಕೆ ವಾರ್ಷಿಕ ೨೪ ಟಿಎಂಸಿ ಕಾವೇರಿ ನೀರನ್ನು ಮೀಸಲಿಡುವ ಸಂಬಂಧ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸುಪ್ರೀಂ ಕೋರ್ಟ್ ಬೆಂಗಳೂರು ನಗರಕ್ಕೆ ೨೪ ಟಿಎಂಸಿ ಕಾವೇರಿ ನೀರನ್ನು ಮೀಸಲಿರಿಸಿ ಆದೇಶ ನೀಡಿತ್ತು. ಅದರಂತೆ ಸರ್ಕಾರಿ ಆದೇಶ ಹೊರಡಿಸುವ ಕೆಲಸ ಆಗಿರಲಿಲ್ಲ. ನಿನ್ನೆ ಈ ಬಗ್ಗೆ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ ಎಂದರು.
ಬೆಂಗಳೂರು ನಗರಕ್ಕೆ ೨೪ ಟಿ.ಎಂ.ಸಿ. ಕಾವೇರಿ ನೀರನ್ನು ಮೀಸಲಿರಿಸುವ ಸರ್ಕಾರಿ ಆದೇಶ ಹೊರಡಿಸಿರುವುದರಿಂದ ಸುಪ್ರೀಂ ಕೋರ್ಟ್ ಕಾವೇರಿ ಪ್ರಾಧಿಕಾರಗಳಲ್ಲಿ ನಾವು ನಮ್ಮ ವಾದಗಳ ಮಂಡನೆ ಸಮಯದಲ್ಲಿ ದಾಖಲಾತಿ ಒದಗಿಸಲು ಸಾಧ್ಯವಾಗುತ್ತದೆ. ನಮಗೆ ಎಷ್ಟು ನೀರು ಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು ಈ ಸರ್ಕಾರಿ ಆದೇಶ ನೆರವಾಗುತ್ತದೆ ಎಂದರು.
ಮಳೆ ಕೊರತೆಯಿಂದ ನಮ್ಮಲ್ಲಿ ನೀರಿನ ಕೊರತೆ ಇದ್ದರೂ ತಮಿಳುನಾಡಿನವರು ನೀರು ಬಿಡಿ ಎಂದು ಕೇಳುತ್ತಾರೆ. ಈಗಲೂ ಸಂಕಷ್ಟ ಸಮಯದಲ್ಲಿ ೨ ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಹೊರಡಿಸಿರುವ ಆ ಸರ್ಕಾರಿ ಆದೇಶದಿಂದ ನ್ಯಾಯಾಲಯದಿಂದ ನಮಗೆ ನೀರು ಎಷ್ಟು ಬೇಕು, ನಾವೆಷ್ಟು ನೀರನ್ನು ಇಟ್ಟುಕೊಳ್ಳಬೇಕಿದೆ ಎಲ್ಲವನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಮೇಕೆದಾಟು: ಚರ್ಚೆ
ಮೇಕೆದಾಟು ಯೋಜನೆಯ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಮುಂದಿನ ವಾರ ಮೇಕೆದಾಟು ಯೋಜನೆಯ ಬಗ್ಗೆ ಸಭೆಯಲ್ಲಿ ಚರ್ಚೆಗಳು ಆಗಲಿವೆ ಎಂದರು.
ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ಹೆಚ್ಚು ಲಾಭವಾಗಲಿದೆ. ಸಂಕಷ್ಟ ಸಮಯದಲ್ಲಿ ನೀರು ಒದಗಿಸಲು ಈ ಯೋಜನೆ ನೆರವಾಗುತ್ತದೆ. ಎಲ್ಲವನ್ನು ಪ್ರಾಧಿಕಾರದ ಗಮನಕ್ಕೆ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದರು.
ಆಪರೇಷನ್ ಕಮಲ ಸಾಧ್ಯವಿಲ್ಲ
ಬಿಜೆಪಿಯವರು ಆಪರೇಷನ್ ಕಮಲ ಮಾಡಿ ನಮ್ಮ ಶಾಸಕರನ್ನು ಸೆಳೆಯಲು ಆಗಲ್ಲ. ಅನಗತ್ಯವಾಗಿ ಬಿಜೆಪಿಯವರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಅಷ್ಟೆ ಎಂದರು.ಬಿಜೆಪಿಯಲ್ಲೇ ಸಾಕಷ್ಟು ಸಮಸ್ಯೆಗಳಿವೆ. ನಾಯಕತ್ವದ ಬಗ್ಗೆ ಇನ್ನು ತೀರ್ಮಾನ ಆಗಿಲ್ಲ. ಇಷ್ಟಾದರೂ ಆಪರೇಷನ್ ಕಮಲದ ಬಗ್ಗೆ ಬಿಜೆಪಿಯವರು ಮಾತನಾಡುವುದು ಅರ್ಥಹೀನ ಎಂದರು.ಪ್ರಚಾರದಲ್ಲಿ ಉಳಿಯಲು ಬಿಜೆಪಿ ಸಹ ಪ್ರಯತ್ನ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ನಡೆದಿರುವ ಸಭೆಯ ಬಗ್ಗೆ ನಾನು ಮಾತನಾಡಲ್ಲ. ಬಿಜೆಪಿಯವರ ಪ್ರತಿಯೊಂದು ಹೆಜ್ಜೆಯ ನಡೆ ಎಲ್ಲವೂ ನನಗೆ ಗೊತ್ತಿದೆ ಎಂದು ಅವರು ಹೇಳಿದರು.