ಬೆಂಗಳೂರಿಗೆ ಮತ್ತಷ್ಟು ಲಸಿಕೆ, ಪ್ರಧಾನಿ ಭರವಸೆ:ಗುಪ್ತ


ಬೆಂಗಳೂರು, ಮೇ.೧೮- ಕೋವಿಡ್ ವಿರುದ್ಧ ಪರಿಣಾಮಕಾರಿ ಆಗಿ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಮತ್ತಷ್ಟು ಲಸಿಕೆ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ನಗರದಲ್ಲಿಂದು ವಿಡಿಯೋ ಸಂವಾದದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ ಎರಡನೇ ಅಲೆ ನಿಯಂತ್ರಣ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ಜತೆಗೆ ಚರ್ಚೆಯಾಗಿದ್ದು, ಆರೋಗ್ಯ ವ್ಯವಸ್ಥೆ ಮಾಹಿತಿ ಹಂಚಿಕೊಳ್ಳಲಾಗಿದೆ. ಜತೆಗೆ
ಲಸಿಕೆ ಇನ್ನಷ್ಟು ಅಗತ್ಯದ ಬಗ್ಗೆ ಬೇಡಿಕೆ ಇಡಲಾಗಿದ್ದು, ಪ್ರಧಾನಿ ಸಮ್ಮತಿಸಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದ ಅವರು, ಹೋಂ ಐಸೋಲೇಷನ್, ಸಿಸಿಸಿ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಕರೋನಾದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂಬ ಸಲಹೆ ನೀಡಿದ್ದಾರೆ. ನಗರಕ್ಕೆ ಲಸಿಕೆ ಹೆಚ್ಚಳ ಮಾಡುವ ಬಗ್ಗೆಯೂ ಭರವಸೆ ನೀಡಿದ್ದಾರೆ.ಆದರೆ, ಲಾಕ್ ಡೌನ್ ವಿಸ್ತರಣೆ ವಿಚಾರ ಸರ್ಕಾರ ಕೈಗೊಳ್ಳುತ್ತೆ ಎಂದು ನುಡಿದರು.
ಇದೇ ವೇಳೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ, ವಾರ್‌ರೂಂ, ಕಂಟ್ರೋಲ್‌ರೂಂ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದು, ಲಸಿಕೆ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇನ್ನು, ಸಭೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.
ಚೆನ್ನೈನಲ್ಲಿ ಕಾರ್ ಆಂಬುಲೆನ್ಸ್ ಮಾಡಿದ್ದಾರೆ ಅದರ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು ಎಂದು ಅವರು ತಿಳಿಸಿದರು.