ಬೆಂಗಳೂರಿಗೆ ಬರುವವರಿಗೆ ಕೋವಿಡ್ ಪರೀಕ್ಷೆ

Corono test is done at majestic bus stand for public

ಬೆಂಗಳೂರು, ಮಾ.೨೬- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದ್ದು ಹೊರಭಾಗಗಳಿಂದ ಬರುವವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.
ನಗರದ ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ ರೈಲು ನಿಲ್ದಾಣಗಳಲ್ಲಿ ಇಂದಿನಿಂದ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು,ಸಾರ್ವಜನಿಕರು ಸಾಲು ಸಾಲಾಗಿ ನಿಂತಿದ್ದ ದೃಶ್ಯ ಕಂಡಿತು.
ಇತ್ತೀಚೆಗೆ ಕೋವಿಡ್-೧೯ ದೃಢ ಪ್ರಕರಣಗಳ ಸಂಖ್ಯೆ ನಿತ್ಯ ಒಂದು ಸಾವಿರದ ಗಡಿ ದಾಟುತ್ತಿವೆ. ಈ ಹಿನ್ನೆಲೆ ನಗರದ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಮುಂಭಾಗದಲ್ಲಿ ಸೇರಿದಂತೆ ಜನದಟ್ಟಣೆಯ ಪ್ರದೇಶದಲ್ಲಿ ಕೋವಿಡ್ ಪರೀಕ್ಷಾ ಕಿಯೋಸ್ಕ್ ತೆರೆಯಲಾಗಿದ್ದು ನೂರಾರು ಜನರು ಸರತಿ ಸಾಲಿನಲ್ಲಿ ನಿಂತು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.
ತಿಂಗಳ ಹಿಂದೆ ದಿನಕ್ಕೆ ಕೆಲವೇ ಕೆಲ ಮಂದಿ ಮಾತ್ರ ಪರೀಕ್ಷೆಗೆ ಬರುತ್ತಿದ್ದರು. ಆದರೆ ಈಗ ಪರೀಕ್ಷಾ ಸ್ಥಳದಲ್ಲಿ ಜನಗಂಜುಳಿ ಉಂಟಾಗಿದ್ದು ಇದು ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಮುನ್ಸೂಚನೆಯಾಗಿದೆ ಎಂದು ಸಿಬ್ಬಂದಿ ತಿಳಿಸುತ್ತಾರೆ.
ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದವರ ಮೇಲೆ ನಮ್ಮ ಸಿಬ್ಬಂದಿ ನಿಗಾವಹಿಸಿದ್ದು ಮುಖ್ಯವಾಗಿ ರೈಲು ನಿಲ್ದಾಣಗಳಲ್ಲಿ ಪರೀಕ್ಷೆ ನಡೆಸಲಾಗುವುದು.ಪರೀಕ್ಷೆಗೆ ಒಳಗಾಗುವವರ ವಿಳಾಸ ಸಂಗ್ರಹಿಸಿ ಪರೀಕ್ಷಾ ವರದಿ ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ತಿಳಿಸಿದರು.
ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುವ ಮುನ್ಸೂಚನೆ ಅರಿತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಪರೀಕ್ಷಾ ಪ್ರಕ್ರಿಯೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದ್ಧಾರೆ. ಜಿಲ್ಲೆಯಾದ್ಯಂತ ನಿತ್ಯ ಸಾವಿರಾರು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ. ಪಾಸಿಟಿವ್ ಬಂದವರನ್ನು ತಕ್ಷಣವೇ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲು ಮಾಡಲಾಗುತ್ತಿದೆ.
ಶಾಲಾ- ಕಾಲೇಜುಗಳಲ್ಲಿ ಪರೀಕ್ಷೆ: ಪದವಿ ಪೂರ್ವ, ಪ್ರೌಢಶಾಲೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. ಈ ಪ್ರಕ್ರಿಯೆ ಕೂಡ ಇಂದಿನಿಂದ ಆರಂಭವಾಗಲಿದೆ. ಪ್ರತಿದಿನ ಒಂದು ಪದವಿ ಪೂರ್ವ ಕಾಲೇಜು, ಒಂದು ಪ್ರೌಢಶಾಲೆಯಲ್ಲಿ ಪರೀಕ್ಷೆ ನಡೆಸಲು ಸಿಬ್ಬಂದಿ ಸಜ್ಜಾಗಿದ್ದಾರೆ.
ಕೆಲ ಖಾಸಗಿ ಶಾಲಾ, ಕಾಲೇಜು ಆಡಳಿತ ಮಂಡಳಿ ವತಿಯಿಂದ ವಿದ್ಯಾರ್ಥಿಗಳನ್ನು ತಮ್ಮ ಸಂಸ್ಥೆಯ ವಾಹನದಲ್ಲಿ ತಂಡವಾಗಿ ಕರೆತಂದು ಕೋವಿಡ್ ಪರೀಕ್ಷೆ ಮಾಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿರುವ ಸಿಬ್ಬಂದಿ ವಿದ್ಯಾರ್ಥಿಗಳ ಕೋವಿಡ್ ವರದಿ ಸಂಗ್ರಹ ಮಾಡುತ್ತಿದ್ದಾರೆ.
ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವುದಕ್ಕಿಂತ ಸಂಸ್ಥೆಯ ವತಿಯಿಂದಲೇ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಇದರಿಂದ ಎಲ್ಲರಲ್ಲೂ ಸುರಕ್ಷತಾ ಭಾವ ಮೂಡುತ್ತದೆ’ ಎಂದು ಖಾಸಗಿ ಕಾಲೇಜೊಂದರ ಪ್ರಾಚಾರ್ಯರು ತಿಳಿಸಿದರು.