ಬೆಂಗಳೂರಿಗೆ ಜೆಡಿಎಸ್ ಪ್ರತ್ಯೇಕ ಪ್ರಣಾಳಿಕೆ

ಬೆಂಗಳೂರು,ಮೇ.೬-ವಿಧಾನಸಭಾ ಚುನಾವಣೆಗೆ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಜಾತ್ಯಾತೀತ ಜನತಾ ದಳ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ವರಿಷ್ಠ ಹಾಗೂ ಪ್ರಧಾನಿ ಎಚ್.ಡಿ ದೇವೇಗೌಡ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಧಾನಸಭಾ ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿಯಿರುವ ಹೊತ್ತಲ್ಲೇ ಪ್ರಣಾಳಿಕೆ ಬಿಡುಗಡೆ ಮಾಡಿದರು.
ವಸತಿ ಆಸರೆ, ಬೆಂಗಳೂರಿನಲ್ಲಿ ಪ್ರಬಲ ಆಡಳಿತ, ಪಿಂಚಣಿ ಯೋಜನೆ, ಪರಿಸರ ಸ್ನೇಹಿ ಸ್ವಚ್ಚ ಬೆಂಗಳೂರು, ನಮ್ಮ ಮೆಟ್ರೋ ವಿಸ್ತರಣೆ, ಮಹಿಳಾ ಸುರಕ್ಷತೆ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳು ಪ್ರಣಾಳಿಕೆಯಲ್ಲಿ ಸೇರಿವೆ. ಪಿಂಚಣಿ ಯೋಜನೆ, ಆರೋಗ್ಯ, ಶಿಕ್ಷಣ, ಸಿಲಿಕಾನ್ ಸಿಟಿ ಪುನರ್ ನಿರ್ಮಾಣ, ಮಹಿಳಾ ಸುರಕ್ಷತೆ, ಬೆಂಗಳೂರು ನಗರದ ಕಣಿವೆ, ಕೆರೆಗಳ ಸಂರಕ್ಷಣೆ ಹಾಗೂ ಕಾಲುವೆಗಳ ಪುನಶ್ಚೇತನಕ್ಕೆ ಒತ್ತು ನೀಡುವುದಾಗಿ ಭರವಸೆ ನೀಡಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಲೋಕಸಭೆ ಚುನಾವಣೆಯಲ್ಲ, ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸುವುದು ಅಗತ್ಯವಿದೆಯೇ ಎಂಬುದನ್ನು ಅವರೇ ತೀರ್ಮಾನ ಮಾಡಬೇಕು. ಈ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮೋದಿ ರೋಡ್ ಶೋ ನಡೆಸುವುದರಿಂದ ಜನರಿಗೆ ತೊಂದರೆಯಾಗುತ್ತದೆ ಎಂಬ ಅಂಶವನ್ನು ಬಿಜೆಪಿ ನಾಯಕರು ನಿರ್ಧರಿಸಬೇಕು ಈ ಬಗ್ಗೆ ಏನನ್ನು ಕೇಳಬೇಡಿ ಎಂದು ಹೇಳಿದರು.
ಪ್ರಣಾಳಿಕೆಯ ಕಾರ್ಯಕ್ರಮದಲ್ಲಿ ಪ್ರಣಾಳಿಕೆ ಸಮಿತಿ ಸದಸ್ಯ ಕುಪೇಂದ್ರ ರೆಡ್ಡಿ, ಕೆ.ಎಂ ತಿಪ್ಪೇಸ್ವಾಮಿ, ಟಿ.ಎ ಶರವಣ ಮತ್ತಿತರರು ಭಾಗವಹಿಸಿದ್ದರು.