ಬೆಂಗಳೂರಲ್ಲಿ ಸೋಂಕು ಹೆಚ್ಚಳ

ಬೆಂಗಳೂರು, ಸೆ.೩- ಮಹಾನಗರ ಬೆಂಗಳೂರಿನ ಕೆಲವು ಭಾಗಗಳಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತಾ, ಸಾರ್ವಜನಿಕರು ಪ್ರಯಾಣ, ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಸೋಂಕು ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸಬೇಕೆಂದು ಅವರು ತಾಕೀತು ಮಾಡಿದ್ದಾರೆ. ೩ನೇ ಅಲೆ ಕಾಣಿಸಿಕೊಳ್ಳುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ನಾಗರೀಕರು ಅಗತ್ಯ ಮುನ್ನೆಚ್ಚೆರಿಕೆ ಕೈಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ನಗರಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಮಹಾದೇವಪುರ, ಪೂರ್ವ ವಿಭಾಗದಲ್ಲಿ ಕೊಂಚ ಮಟ್ಟಿಗೆ ಕೊರೋನಾ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಇಲ್ಲಿನ ಜನರು ಅಂತರರಾಜ್ಯ, ವಿದೇಶ ಪ್ರಯಾಣ ಕೈಗೊಂಡಿರುವುದೇ ಮುಖ್ಯ ಕಾರಣ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಒಟ್ಟಾರೆ ೧೦ ಲಕ್ಷ ಐಟಿ ಕಂಪನಿಗಳ ಉದ್ಯೋಗಿಗಳಿದ್ದಾರೆ.ಇನ್ನು, ಕಟ್ಟಡ ಕಾರ್ಮಿಕರು ಸೇರಿದಂತೆ ಲಕ್ಷಾಂತರ ವಲಸೆ ಕಾರ್ಮಿಕರು ಇಲ್ಲಿ ನೆಲೆಸಿದ್ದು, ಅವರು ಅನಗತ್ಯ ಅಂತರರಾಜ್ಯ ಓಡಾಟ ನಡೆಸುವ ಕಾರಣದಿಂದಾಗಿ ಸೋಂಕು ಹಬ್ಬಿರುವ ಮಾಹಿತಿ ಸಮೀಕ್ಷೆಗಳಿಂದ ಗೊತ್ತಾಗಿದೆ ಎಂದು ವಿವರಿಸಿದರು.
ಬಹುತೇಕ ಐಟಿ ಕಂಪನಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೂ, ಹಲವರು ಮೋಜು ಮಸ್ತಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಗರಕ್ಕೆ ವಾಪಸ್ಸು ಬರುತ್ತಿದ್ದಾರೆ. ಸೋಂಕು ಹರಡಲು ಇದೊಂದು ಕಾರಣವೂ ಆಗಿದೆ. ಯಾರೇ ಆಗಲಿ ಇನ್ನಷ್ಟು ದಿನಗಳ ಕಾಲ ಎಚ್ಚರವಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಯಾರು ಸೋಂಕಿತರು ಅವರನ್ನು ಕ್ವಾರಂಟೈನ್ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಸೋಂಕು ಕಂಡುಬಂದರೆ, ಕ್ವಾರಂಟೈನ್, ಸೀಲ್‌ಡೌನ್ ಮಾಡಿ ಎಚ್ಚರವಹಿಸಲಾಗುತ್ತಿದೆ.
ಅದೇ ರೀತಿ ಪ್ರದೇಶವಾರು ಕ್ಲಸ್ಟರ್‌ಗಳೆಂದು ಗುರುತಿಸಿ, ಪಾಲಿಕೆ ಆರೋಗ್ಯಾಧಿಕಾರಿಗಳು ವಿಶೇಷ ಗಮನ ನೀಡುತ್ತಿದ್ದಾರೆ. ಏನೇ ಆದರೂ, ಬೆಂಗಳೂರಿನಲ್ಲಿ ಕೋವಿಡ್ ವ್ಯಾಪಕವಾಗಿ ಹರಡಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ನುಡಿದರು.
ಕೋವಿಡ್ ಮುಕ್ತ ಸಾಧ್ಯವಿಲ್ಲ: ಈಗಾಗಲೇ ಪ್ರಪಂಚದ ಮುಂದುವರೆದ ದೇಶಗಳು ಕೋವಿಡ್ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿವೆ. ಇಂದೂ ಸಹ ಇಸ್ರೇಲ್, ಅಮೆರಿಕಾ, ಇಂಗ್ಲೇಡ್ ಸೇರಿದಂತೆ ಇನ್ನಿತರೆ ದೇಶಗಳಲ್ಲಿ ಹೊಸ ತಳಿಯ ಕೊರೊನಾ ಸೋಂಕು ಹಬ್ಬಿದೆ. ಹೀಗಾಗಿ, ನಾವು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗಬೇಕಾಗಿದೆ ಎಂದರು.
ಹಬ್ಬ ಜಾಗೃತಿ ಅಗತ್ಯ: ಮುಂದಿನ ದಿನಗಳಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಕ ಜನಸಂದಣಿ ಕಂಡು ಬರುತ್ತದೆ. ಹೀಗಾಗಿ ಜನರು ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಬಳಸುವುದು ಕಡ್ಡಾಯವಾಗಿ ಮಾಡಬೇಕು ಎಂದರು.
ಒಂದು ವೇಳೆ ಕೋವಿಡ್ ಮಾರ್ಗಸೂಚಿ ಕೈಬಿಟ್ಟರೆ, ಅಪಾಯ ಎದುರಾಗಲಿದೆ ಎಂದ ಅವರು, ಎಲ್ಲರೂ ಲಸಿಕೆ ಪಡೆಯುವಂತಾಗಬೇಕು. ಆಗ ಕೋವಿಡ್ ಸೋಂಕು ತಗುಲಿದರೂ, ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಗೌರವ್‌ಗುಪ್ತ ಹೇಳಿದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ
ಬಿಬಿಎಂಪಿ ಈಗ ೮ ರಿಂದ ೧೦ ಕೋವಿಡ್ ಕೇರ್ ಸೆಂಟರ್‌ಗಳನ್ನು ನಿರ್ವಹಿಸುತ್ತಿದ್ದು, ಇಲ್ಲಿ ರೋಗಿಗಳ ಸಂಖ್ಯೆಯೂ ತೀರಾ ತಗ್ಗಿದೆ. ಆದರೆ, ಇಲ್ಲಿ ಆಹಾರ ಗುಣಮಟ್ಟ ಸರಿಯಿಲ್ಲ ಎಂಬ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗುಪ್ತ ಎಚ್ಚರಿಕೆ ನೀಡಿದರು.