ಬೆಂಗಳೂರಲ್ಲಿ ಸಂಭ್ರಮ, ಸಡಗರದ ನಾಗಪಂಚಮಿ

ಬೆಂಗಳೂರು ಅ.೨೧ :ಹುಟ್ಟಿ ಬೆಳೆದಿದ್ದು ಉತ್ತರ ಕರ್ನಾಟಕದ ಹಳ್ಳಿ ಪಟ್ಟಣಗಳಲ್ಲಿ. ಬದುಕು ಕಟ್ಟಿಕೊಂಡು ಬದುಕುತ್ತಿರುವುದು ಬೆಂಗಳೂರು ಮಹಾನಗರದಲ್ಲಿ. ಹೀಗಿರುವಾಗ ಹುಟ್ಟಿ ಬೆಳೆದ ಊರು ನಮ್ಮೂರು ಹಾಗೂ ಇಂದು ಬಾಳಿ ಬೆಳಗುತ್ತಿರುವ ಬೆಂಗಳೂರು ಸಹ ನಮ್ಮೂರು. ಪ್ರತಿಯೊಂದು ಹೆಣ್ಣಿಗೂ ಗಂಡನ ಮನೆಯ ಒಡೆತನ ಎಷ್ಟು ಮುಖ್ಯವೂ ಅಷ್ಟೇ ತವರು ಮನೆ ಕರುಳು ಬಳ್ಳಿಯ ಪ್ರೀತಿಯು ಮಹತ್ವದ್ದಾಗಿರುತ್ತದೆ. ಇವೆರಡು ಮನೆಯ ಸಂಸ್ಕೃತಿ- ಸಂಸ್ಕಾರ -ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಪ್ರತೀಕವಾಗಿ ಬೆಂಗಳೂರಿನಲ್ಲಿ ಬದುಕುತ್ತಿರುವ ಉತ್ತರ ಕರ್ನಾಟಕದ ನೂರಾರು ಗೆಳತಿಯರು ಹಾಗೂ ಅಕ್ಕತಂಗಿಯರು ಸೇರಿ ಅತ್ಯಂತ ಸಡಗರ ಸಂಭ್ರಮದಿಂದ ನಾಗಪಂಚಮಿ ಹಬ್ಬವನ್ನು ಆಚರಿಸಿದರು.
ಒಡಹುಟ್ಟಿದ ಅಣ್ಣ-ತಮ್ಮಂದಿರ ಬದುಕಿನಲ್ಲಿ ಸುಖ ಸಮೃದ್ಧಿ ಸಿಗುವುದರ ಜೊತೆಗೆ ತಾನು ಹುಟ್ಟಿ ಬೆಳೆದ ತವರು ಸದಾ ಹಚ್ಚ ಹಸಿರಾಗಿ ನಳನಳಿಸಲಿ ಎಂದು ಹರಿಸಿ ನಾಗರಪಂಚಮಿ ಹಬ್ಬವನ್ನು ಆಚರಿಸಿದರು.
ನಮ್ಮೂರ ನಾಗಪಂಚಮಿ ವೇದಿಕೆ ಕಳೆದ ವಾರಾಂತ್ಯ ಬೆಂಗಳೂರಿನ ಅರಮನೆ ಆವರಣದಲ್ಲಿರುವ ವೃಕ್ಷ ಕಲಾ ಮಂಟಪದಲ್ಲಿ ನಾಗ ಪಂಚಮಿ ಹಬ್ಬವನ್ನು ಹಮ್ಮಿಕೊಂಡಿತ್ತು. ಉದ್ಯೋಗ ಅರಿಸಿ ಹಾಗೂ ಮದುವೆಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸುಮಾರು ೫೦೦ ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಒಟ್ಟಾಗಿ ಸೇರಿ ಸಾಂಪ್ರದಾಯಿಕ ನಾಗ ಪಂಚಮಿ ಹಬ್ಬವನ್ನು ಆಚರಿಸಿದರು. ಉತ್ತರ ಕರ್ನಾಟಕದಲ್ಲಿ ವರ್ಷದ ಸರಣಿ ಹಬ್ಬಗಳ ಮೊಟ್ಟ ಮೊದಲ ಹಬ್ಬವಾದ ನಾಗರಪಂಚಮಿ ಪ್ರಯುಕ್ತ ಹಳ್ಳಿ ಪಟ್ಟಣಗಳಲ್ಲಿ ಹೆಣ್ಣು ಮಕ್ಕಳು ಸಾಂಪ್ರದಾಯಕ ಬಣ್ಣ ಬಣ್ಣದ ಸೀರೆ ಉಟ್ಟು ನಾಗ ಪೂಜೆ ಗೋ ಪೂಜೆ ಮಾಡಿ ಆಟೋಟಗಳಲ್ಲಿ ತಲ್ಲೀನರಾಗುವಂತೆ ಬೆಂಗಳೂರಿನಲ್ಲೂ ಸಹ ಹಳ್ಳಿ ಶೈಲಿಯಲ್ಲಿಯೆ ಹಬ್ಬವನ್ನು ಆಚರಿಸಲಾಯಿತು.
ಉತ್ತರ ಕರ್ನಾಟಕದ ಸಾಂಪ್ರದಾಯಿಕ ಬಣ್ಣ ಬಣ್ಣದ ಇಲಕಲ್ ಹಾಗೂ ರೇಷ್ಮೆ ಸೀರೆ ಉಟ್ಟ ನೂರಾರು ಮಹಿಳೆಯರು ಸಾಂಪ್ರದಾಯದಂತೆ ಗಣೇಶ ಪೂಜೆಯೊಂದಿಗೆ ಹಬ್ಬವನ್ನು ಆರಂಭಿಸಿ ನಂತರ ಗೋ ಪೂಜೆ ನೆರವೇರಿಸಿದರು. ಕಾರ್ಯಕ್ರಮದ ಆವರಣದಲ್ಲಿ ಮಣ್ಣಿನಿಂದ ಮಾಡಿದ ಹುತ್ತಿಗೆ ಹಾಲೆರೆದು ನಾಗ ಪೂಜೆ ಮಾಡುವುದರೊಂದಿಗೆ ಹಬ್ಬದ ಸಡಗರಕ್ಕೆ ಚಾಲನೆ ನೀಡಿದರು. ಉತ್ತರ ಕರ್ನಾಟಕ ಮೂಲದವರಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಹ ಭಾಗವಹಿಸಿ ಡೊಳ್ಳು ಕುಣಿತದ ಕಲಾವಿದರೊಂದಿಗೆ ಹೆಜ್ಜೆ ಹಾಕುತ್ತ ವೇದಿಕೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಬಾಲ್ಯದ ನೆನಪುಗಳನ್ನು ಮೇಲಕು ಹಾಕಿದರು.
ಹೆಣ್ಣು ಮಕ್ಕಳಿಗೆ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ತಮ್ಮ ಅಣ್ಣ-ತಮ್ಮಂದಿರ ಮೇಲಿರುವ ಪ್ರೀತಿ ವಾತ್ಸಲ್ಯವನ್ನು ಭಾವನಾತ್ಮಕವಾಗಿ ವಿವರಿಸಿದರು.ಕೆಲಸದ ಒತ್ತಡದಲ್ಲಿ ಊರಿಗೆ ಹೋಗಿ ಪಂಚಮಿ ಹಬ್ಬ ಆಚರಿಸಲು ಸಾಧ್ಯ ವಾಗದಿದ್ದರು ಈ ಕಾರ್ಯಕ್ರಮ ಆ ಕೊರತೆಯನ್ನು ನೀಗಿಸಿತು ಎಂದು ಕಾರ್ಯಕ್ರಮದ ಆಯೋಜಕರ ತಂಡದ ನಾಯಕಿ ಊರ್ಮಿಳ ಕಳಸದ ಹಾಗೂ ಅವರ ಸದಸ್ಯರನ್ನು ಅಭಿನಂದಿಸಿದರು.
ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್, ವೈದ್ಯ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಮೀನಾಕ್ಷಿ ಕೃಷ್ಣ ಭೈರೇಗೌಡ ಅನೇಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಪಂಚಮಿ ಹಬ್ಬದ ಜಾನಪದ ಹಾಡುಗಳಿಗೆ ಹೆಜ್ಜೆ ಹಾಕಿ ಗ್ರಾಮೀಣ ಸಂಸ್ಕೃತಿ- ಸಂಪ್ರದಾಯವನ್ನು ಆಚರಿಸಿದರು. ನೂರಾರು ಮಹಿಳೆಯರು ಒಟ್ಟಾಗಿ ಕೋಲಾಟ, ಪುಗಡಿ ಆಟ, ಸೇವಿಗೆ ಹೊಸೆಯುವದು, ಶೇಂಗಾ ವಡೆಯುವದು, ವಡಪ ಹೇಳುವುದು ಸೇರಿದಂತೆ ಅನೇಕ ಗ್ರಾಮೀಣ ಆಟಗಳಲ್ಲಿ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.