ಬೆಂಗಳೂರಲ್ಲಿ ಮೋದಿ ಪವರ್ ಶೋ

ಹರಿದು ಬಂದ ಜನ ಸಾಗರ
ಬೆಂಗಳೂರು,ಮೇ೭:ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜಧಾನಿ ಬೆಂಗಳೂರಿನಲ್ಲಿ ೨ನೇ ದಿನವೂ ಭರ್ಜರಿ ರೋಡ್ ಶೋ ಮೂಲಕ ಮತಶಿಕಾರಿ ನಡೆಸಿದರು. ರೋಡ್ ಶೋ ನಡೆಸಿದ ಕಡೆಯಲ್ಲೆಲ್ಲ ಬಿಜೆಪಿಯ ಹವಾ ಎಬ್ಬಿಸುವಲ್ಲಿ ಯಶಸ್ವಿಯಾದರು. ಪ್ರಧಾನಿ ಮೋದಿ ಅವರ ರೋಡ್ ಶೋಗೆ ಜನಸಾಗರವೇ ಹರಿದು ಬಂದಿತ್ತು. ನಿನ್ನೆ ಬೆಂಗಳೂರಿನಲ್ಲಿ ದಾಖಲೆಯ ೨೬ ಕಿ.ಮೀ ರೋಡ್ ಶೋ ನಡೆಸಿ ಮತಬೇಟೆ ನಡೆಸಿದ್ದ ಮೋದಿ ಅವರು ಇಂದು ಸುಮಾರು ೬ ಕಿ.ಮೀ ರೋಡ್ ಶೋ ನಡೆಸಿದರು.ನಿನ್ನೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಅಬ್ಬರದ ರೋಡ್ ಶೋ ನಡೆಸಿದ್ದ ಮೋದಿ ಅವರು, ಇಂದು ಬೆಂಗಳೂರು ಕೇಂದ್ರ ಭಾಗದಲ್ಲಿ ರೋಡ್ ಶೋ ನಡೆಸಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದರು.ಪ್ರಧಾನಿಯವರ ರೋಡ್ ಶೋಗೆ ಅಪಾರ ಜನಸ್ತೋಮ ಸೇರಿದ್ದು, ಅವರು ರೋಡ್ ಶೋ ನಡೆಸಿದ ಮಾರ್ಗದ ಇಕ್ಕೆಲಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಜನ ಸಾಗರ ನೆರೆದಿದ್ದು, ಮೋದಿ ಅವರನ್ನು ಕಣ್ತುಂಬಿಕೊಂಡರು. ಹಾಗೆಯೇ, ಜೈಕಾರದ ಘೋಷಣೆಗಳನ್ನೂ ಕೂಗಿದರು.
ಬೆಂಗಳೂರಿನ ಇಂದಿರಾನಗರ ಬಳಿ ಇರುವ ನ್ಯೂ ತಿಪ್ಪಸಂದ್ರದಿಂದ ಪ್ರಧಾನಿ ಮೋದಿ ಅವರು ರೋಡ್ ಶೋ ಆರಂಭಿಸಿದ್ದು, ರೋಡ್ ಶೋ ಆರಂಭದಲ್ಲಿ ಪ್ರಧಾನಿಯವರಿಗೆ ಕೇರಳದ ಕಲಾತಂಡ ಚಂಡೆ ವಾದ್ಯದ ಮೂಲಕ ಸ್ವಾಗತ ಕೋರಿದರು. ಹಾಗೆಯೇ, ಕೆಲ ಪಂಡಿತರು ಹನುಮಾನ್ ಚಾಲೀಸ್ ಮಂತ್ರವನ್ನು ಪಠಣೆ ಮಾಡಿದರು.ವಿವಿಧ ಕಲಾತಂಡಗಳು ರಸ್ತೆಯ ಎರಡೂ ಕಡೆ ನಿಂತು ತಮ್ಮ ಕಲಾ ಪ್ರದರ್ಶನದ ಮೂಲಕ ಪ್ರಧಾನಿಯವರನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಸ್ವಾಗತ ಕೋರಿದರು.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಿಪ್ಪಸಂದ್ರದಿಂದ ಟ್ರಿನಿಟಿ ವೃತ್ತದವರೆಗೆ ರೋಡ್ ಶೋ ನಡೆಸಿ ಮತಯಾಚಿಸಿದರು.

ಪುಷ್ಟವೃಷ್ಠಿ
ಪ್ರಧಾನಿಯವರು ರೋಡ್ ಶೋನಲ್ಲಿ ಸಾಗುತ್ತಿದ್ದಂತೆಯೇ ನೆರೆದಿದ್ದ ಜನಸ್ತೋಮ ಅವರತ್ತ ಹೂವಿನ ಸುರಿಮಳೆಗೈದು ಜೈ ಜೈ ಮೋದಿ, ಭಾರತ್ ಮಾತಾಕಿ ಜೈ, ಬಿಜೆಪಿಗೆ ಜೈ, ಭಜರಂಗ ಬಲಿ ಘೋಷಣೆಗಳನ್ನು ಹಾಕಿದರು. ರೋಡ್ ಶೋ ಉದ್ದಕ್ಕೂ ಪ್ರಧಾನಿ ಮೋದಿ ಅವರು ಜನರತ್ತ ಹರ್ಷಚಿತ್ತರಾಗಿ ಕೈಬೀಸುತ್ತ, ಕೈಮುಗಿದು ಸಾಗಿದರು.
ನ್ಯೂ ತಿಪ್ಪಸಂದ್ರದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ರೋಡ್ ಶೋ ಆರಂಭಿಸಿದ ಪ್ರಧಾನಿಯವರು,
ತಿಪ್ಪಸಂದ್ರದ ಬೆಮೆಲ್ ಗೇಟ್, ೮೦ ಅಡಿ ರಸ್ತೆ, ೧೨ನೇ ಮುಖ್ಯರಸ್ತೆ, ಇಎಸ್‌ಐ ಆಸ್ಪತ್ರೆ ಜಂಕ್ಷನ್, ದೊಮ್ಮಲೂರು ೧೨ನೇ ಮುಖ್ಯರಸ್ತೆ, ಚಿನ್ಮಯಮಿಷನ್ ಆಸ್ಪತ್ರೆ ರಸ್ತೆ, ಲಕ್ಷ್ಮಿಪುರ, ಜೋಗುಪಾಳ್ಯ, ಹಲಸೂರು, ಟ್ರಿನಿಟಿ ಜಂಕ್ಷನ್‌ನಲ್ಲಿ ತಮ್ಮ ರೋಡ್ ಶೋವನ್ನು ಅಂತ್ಯಗೊಳಿಸಿದರು.
ನಿನ್ನೆ ಬೆಂಗಳೂರಿನ ೧೩ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ ಪ್ರಧಾನಿಯವರು, ಇಂದು ಮಹದೇವಪುರ, ಕೆಆರ್ ಪುರ, ಸರ್ ಸಿವಿ ರಾಮನ್ ನಗರ, ಸರ್ವಜ್ಞ ನಗರ, ಶಿವಾಜಿನಗರ, ಶಾಂತಿನಗರ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು.