ಬೆಂಗಳೂರಲ್ಲಿ `ಮದ್ರಾಸ್ ಐ’ ಪ್ರಕರಣ ಏರಿಕೆ ಆಂತಕಕ್ಕೆಡೆ

ಬೆಂಗಳೂರು, ಅ.೧೮-ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಹವಾಮಾನ ಬದಲಾವಣೆ ಆಗಿದ್ದು, ಇದರ ನಡುವೆ ಮಕ್ಕಳಲ್ಲಿ ಹೆಚ್ಚಾಗಿ ಮದ್ರಾಸ್ ಐ ಸಮಸ್ಯೆ ಕಾಡಲಾರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಆಗಾಗ ಮಳೆ, ಬಿಸಿಲಿನ ವಾತಾವರಣ ಇರುವ ಕಾರಣ ಈ ಸೋಂಕು ಕಾಣಿಸಿಕೊಂಡಿದೆ. ಅದರಲ್ಲೂ ನಗರದ ಮಕ್ಕಳಿಗೆ ಈ ಮದ್ರಾಸ್ ಐ ಕಾಟ ಹೆಚ್ಚಾಗಿದೆ. ಈ ರೀತಿಯ ವಾತಾವರಣದಲ್ಲಿ ಮದ್ರಾಸ್ ಐ ಉಂಟುಮಾಡುವ ವೈರಸ್ ಸೂಪರ್ ಸ್ಪ್ರೆಡ್ ಆಗುತ್ತೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನೂ, ಈಗಾಗಲೆ ಆಸ್ಪತ್ರೆಗೆ ದಿನಕ್ಕೆ ೩೫ರಿಂದ ೪೦ ಪ್ರಕರಣಗಳು ಬರುತ್ತಿವೆ. ಮದ್ರಾಸ್ ಐ ಸೋಂಕಿತ ಮಕ್ಕಳೊಂದಿಗೆ ಇತರೆ ಮಕ್ಕಳು ಬೆರೆಯುವುದು, ಒಂದೇ ವಾಹನದಲ್ಲಿ ಓಡಾಟ ಇದರಿಂದ ವೇಗವಾಗಿ ಹರಡುತ್ತಿದೆ ಎಂದೂ ವೈದ್ಯರು ಆತಂಕ ವ್ಯಕ್ತಪಡಿಸಿದರು.
ಪ್ರಮುಖವಾಗಿ ನಾರಾಯಣ ನೇತ್ರಾಲಯ ಒಂದರಲ್ಲೇ ನಿತ್ಯ ೧೫-೨೦ ಕ್ಕೂ ಹೆಚ್ಚು ಮಂದಿ, ಮಿಂಟೋದಲ್ಲಿ ೫-೬ ಮಂದಿ ಕೆಂಗಣ್ಣು ಬೇನೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಇತರೆ ಕಣ್ಣಿನ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಅದರಲ್ಲೂ ವೈರಸ್ ಸೋಂಕಿನ ಕೆಂಗಣ್ಣು ಬೇನೆ ಹಾವಳಿ ಹೆಚ್ಚಿದೆ ಎನ್ನುತ್ತಾರೆ ನೇತ್ರತಜ್ಞರು.
ಕಣ್ಣುಗಳ ಹೊರಭಾಗದ ಸುತ್ತ ಇರುವ ಸೂಕ್ಷ್ಮ ಪದರ (ಕಂಜಕ್ಟಿವಾ)ಕ್ಕೆ ವೈರಸ್ ಅಥವಾ ಬ್ಯಾಕ್ಟೀರಿಯಾದ ಸೋಂಕು ಉಂಟಾಗಿ ಕೆಂಗಣ್ಣು ಬೇನೆ ಕಾಣಿಸಿಕೊಳ್ಳುತ್ತದೆ. ಕಣ್ಣಿನ ಸುತ್ತಲೂ ಬಿಳಿಯ ಅಥವಾ ಹಳದಿ ಬಣ್ಣದ ಲೋಳೆ ಆವರಿಸಿಕೊಳ್ಳುತ್ತದೆ. ಕಣ್ಣುಗಳು ಕೆಂಪಗಾಗುವುದಲ್ಲದೆ ಕಣ್ಣಿನಲ್ಲಿ ನೀರು ಸುರಿಯುತ್ತದೆ.
ಒಂದು ಕಣ್ಣಿಗೆ ಬಂದರೆ ಅದರ ಸೋಂಕು ಇನ್ನೊಂದು ಕಣ್ಣಿಗೂ ಸುಲಭವಾಗಿ ಹರಡುತ್ತದೆ. ಈ ಎಲ್ಲಾ ಲಕ್ಷಣಗಳೊಂದಿಗೆ, ವೈರಸ್‌ನಿಂದ ಹರಡುವ ಕೆಂಗಣ್ಣು ಬೇನೆಯಲ್ಲಿ ಕಣ್ಣಿನ ಊತ ಮತ್ತು ಲಿಂಪ್ ಗ್ರಂಥಿಯ ಸೋಂಕಿನಿಂದ ಕಿವಿಯ ಮುಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಕೆಲವು ರೋಗಿಗಳಲ್ಲಿ ಜ್ವರ, ಗಂಟಲು ನೋವು ಮತ್ತು ಶೀತ ಸೇರಿದಂತೆ ಹಲವು ಲಕ್ಷ ಣಗಳು ಕಂಡು ಬರುತ್ತವೆ.
ಈ ಕುರಿತು ಪ್ರತಿಕ್ರಿಯಿಸಿದ ವೈದ್ಯರೊಬ್ಬರು,
ಮದ್ರಾಸ್ ಐ ವೈರಾಣು ಸೋಂಕಾಗಿದ್ದು, ಒಬ್ಬರಿಂದ ಒಬ್ಬರಿಗೆ ವ್ಯಕ್ತಿಯ ಕೈಗಳಿಂದ, ಅವರು ಬಳಸಿರುವ ಬಟ್ಟೆ, ವಸ್ತುಗಳು ಸಂಪರ್ಕಕ್ಕೆ ಬಂದಾಗ ಈ ರೋಗಾಣು ಹರಡುತ್ತದೆ. ಸೋಂಕು ತಗುಲಿದಾಗ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ಪಿಚ್ಚುಗಟ್ಟುವುದು, ಕಣ್ಣಿನಲ್ಲಿ ಏನಾದರೂ ಬಿದ್ದಿರುವ ಅನುಭವ ಆಗುವುದು ಇದರ ಲಕ್ಷಣವಾಗಿದೆ ಎಂದರು.
ಕಣ್ಣಿನ ಸೋಂಕು ಇರುವ ವಿದ್ಯಾರ್ಥಿಗಳಿಗೆ ರಜೆ ನೀಡಿ ಇತರೆ ಮಕ್ಕಳೊಂದಿಗೆ ಬೇರೆಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕಣ್ಣಿನ ಸೋಂಕು ಇರುವ ವಿದ್ಯಾರ್ಥಿಗಳು ಅಥವಾ ಅವರ ಪಾಲಕರಿಗೆ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆಯಲು ಸೂಚಿಸಬೇಕು. ಯಾವುದೇ ಕಾರಣಕ್ಕೂ ವೈದ್ಯರ ಚೀಟಿಯನ್ನು ಪಡೆಯದೇ ಔಷಧಿ ಅಂಗಡಿಗಳಿಂದ ನೇರವಾಗಿ ಕಣ್ಣಿನ ಔಷಧಿಗಳನ್ನು ಪಡೆದು ಬಳಸಬಾರದು ಎಂದೂ ವೈದ್ಯರು ಸಲಹೆ ನೀಡಿದ್ದಾರೆ.