ಬೆಂಗಳೂರಲ್ಲಿ ಬಾಡಿಗೆ ಮನೆ ಸಿಕ್ಕಿದೆ ಎಂಬ ಪೋಸ್ಟ್ ವೈರಲ್

ಬೆಂಗಳೂರು, ಏ ೩- ಉದ್ಯಾನನಗರಿ, ಸಿಲಿಕಾನ್‌ಸಿಟಿ ಎಂದೆಲ್ಲಾ ಬಿಂಬಿಸಿಕೊಂಡ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಸಖತ್‌ಡಿಮ್ಯಾಂಡ್‌ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಹೌದು ಬೆಂಗಳೂರಿನಂತಹ ಹೈಟೆಕ್ ಸಿಟಿಯಲ್ಲಿ ಬಜೆಟ್‌ಗೆ ತಕ್ಕಂತೆ ಮನೆ ಸಿಗುವುದು ಕಷ್ಟ. ಹೀಗಿರುವಾಗ ವ್ಯಕ್ತಿಯೊಬ್ಬ ವೆಲ್‌ಫರ್ನಿಶಡ್‌ಮನೆ ಸಿಕ್ಕಿರುವ ಖುಷಿಯಲ್ಲಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದೇ ತಡ, ಅನೇಕ ಮಂದಿ ನೆಟ್ಟಿಗರು ಆತನಿಗೆ ಸಖತ್‌ಗೆ ಕಾಲೆಳೆದರೇ, ಇನ್ನು ಕೆಲವರು ಮನೆ ಹುಡುಕಾಟ ಕಷ್ಟ ಎಂದು ಹೇಳಿದ್ದಾರೆ.
ಅನೇಕ ವಿಚಾರ ಸಂಬಂಧ ಆಗಮಿಸುವ ಮಂದಿಗೆ ಬೆಂಗಳೂರಲ್ಲಿ ಇದೀಗ ಬಾಡಿಗೆ ಮನೆ ಪಡೆಯುವುದು ಅಂದುಕೊಂಡಷ್ಟು ಸುಲಭವಲ್ಲ ಅದರಲ್ಲೂ ಬ್ಯಾಚುಲರ್ಸ್‌ಗೆ ಮನೆ ಹುಡುಕುವಷ್ಟರಲ್ಲೇ ಜೀವನವೇ ಬೇಡ ಅನ್ನಿಸಿಬಿಡುತ್ತೆ.
ಅಂತೂ ಕೊನೆಗೆ ಫರ್ನಿಶಡ್ ಮನೆ ಸಿಕ್ತು ಎಂದು ಮಂಥನ್ ಗುಪ್ತಾ ಎನ್ನುವರು ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಸಣ್ಣ ಬೀರು ಮತ್ತು ಟೇಬಲ್ ಹೊಂದಿರುವ ಪುಟ್ಟ ರೂಮಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಗೇಟೆಡ್ ಸೊಸೈಟಿ ಮತ್ತು ೨೪x೭ ಭದ್ರತೆಯಿದೆ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಇದಕ್ಕೆ ೧,೭೫೮ ಲೈಕ್ಸ್ ಬಂದಿದ್ದು, ಇನ್ನು ಹಲವರು ಕಮೆಂಟ್‌ಗಳ ಮೂಲಕ ಮಂಥನ್ ಗುಪ್ತಾನ ಕಾಲೆಳೆದಿದ್ದಾರೆ.
ಬಳಕೆದಾರರೊಬ್ಬರು ‘ಅಪಾರ್ಟ್‌ಮೆಂಟ್ ಮಾಲೀಕರಿಗೆ ರೂಮ್‌ಮೇಟ್ ಅಗತ್ಯವಿದೆಯೇ ‘ ಎಂದು ಪ್ರಶ್ನಿಸಿದ್ದರೆ, ಮತ್ತೊಬ್ಬ ವ್ಯಕ್ತಿ ‘ಇದು ಪರಿಪೂರ್ಣ ಜೈಲಿನಂತಿದೆ ಎಂದು ಕಮೆಂಟ್ ಮೂಲಕ ಕಾಲೆಳೆದಿದ್ದಾರೆ. ಇನ್ನೊಬ್ಬರು ರೂಮಿನಲ್ಲಿ ಏನಿಲ್ಲದಿದ್ದರೂ ಸೂರ್ಯನ ಬೆಳಕಂತೂ ಚೆನ್ನಾಗಿದೆ ಅನ್ಸುತ್ತೆ ಎಂದಿದ್ದಾರೆ. ಮತ್ತೊಬ್ಬರು ‘ನನ್ನ ಕೋಣೆ ಇದಕ್ಕಿಂತಲೂ ಚಿಕ್ಕದಾಗಿದೆ ನೀವು ಲಕ್ಕಿ’ ಎಂದು ತಿಳಿಸಿದ್ದಾರೆ.