ಬೆಂಗಳೂರಲ್ಲಿ ದಿನದಿನಕ್ಕೂ ಹೆಚ್ಚುತ್ತಿರುವ ಸೋಂಕು


ಬೆಂಗಳೂರು, ಏ.೧೭- ನಗರದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಅಟ್ಟಹಾಸ ಮಿತಿ ಮೀರುತ್ತಿದ್ದು, ಶನಿವಾರ ಮಧ್ಯಾಹ್ನ ವೇಳೆಗೆ ಬರೋಬ್ಬರಿ ೧೧,೩೯೬ ಕೋವಿಡ್ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ.

ಬಿಬಿಎಂಪಿ ಮಾಹಿತಿ ಪ್ರಕಾರ ಇಲ್ಲಿನ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ೧,೧೨೪, ದಾಸರ ಹಳ್ಳಿ ೩೧೮, ಪೂರ್ವ೧೬೯೨, ಮಹದೇವಪುರ ೧,೪೦೫, ಆರ್ ಆರ್ ನಗರ ೭೫೭, ದಕ್ಷಿಣ ೨೧೧೭, ಪಶ್ಚಿಮ ೧೪೭೯, ಯಲಹಂಕ ೫೭೦ ಆನೇಕಲ್ ೩೦೨ ಸೇರಿದಂತೆ ಒಟ್ಟು ೧೧,೩೯೬ ಬೆಳಕಿಗೆ ಬಂದಿದೆ.

ಮತ್ತೊಂದೆಡೆ ಸೋಂಕು ಪೀಡಿತರ ಪೈಕಿ ಕಳೆದ ೨೪ ಗಂಟೆಗಳಲ್ಲಿ ೫೭ ಮಂದಿ ಸಾವನ್ನಪ್ಪಿರುವುದು ಇದೇ ಮೊದಲು.ಇದರ ಪರಿಣಾಮ ಅಂತ್ಯಕ್ರಿಯೆಗಾಗಿ ವಿದ್ಯುತ್ ಚಿತಾಗಾರಗಳ ಬಳಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ೨೪ ಗಂಟೆಗಳಲ್ಲಿ ಬಿಬಿಎಂಪಿ ಅಧಿಕೃತ ಮಾಹಿತಿ ಅನ್ವಯ ಬೆಂಗಳೂರು ನಗರ ಜಿಲ್ಲೆಯಲ್ಲಿಇದುವರೆಗೆ ೫,೨೨,೪೩೮ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ೪,೩೭,೮೦೧ ಮಂದಿ ಚೇತರಿಸಿಕೊಂಡಿದ್ದಾರೆ. ಉಳಿದ ೭೯,೬೧೬ ಮಂದಿ ನಿಗದಿತ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿಯವರೆಗೆ ಚಿಕಿತ್ಸೆ ಫಲಿಸದೆ ೫೦೨೦ ಮಂದಿ ಕೊರೋನಾ ಗೆ ಬಲಿಯಾಗಿದ್ದಾರೆ. ಸೋಂಕು ಪತ್ತೆ ಪ್ರಮಾಣವು ಶೇ. ೮ಕ್ಕೆ ಏರಿಕೆಯಾಗಿದ್ದು, ಮರಣ ದರವು ಶೇ ೦.೪೬ರಷ್ಟಿದೆ. ಸಕ್ರಿಯ ಸೋಂಕಿತರ ಪ್ರಮಾಣವು ಶೇ ೧೫.೨೪ಕ್ಕೆ ಹೆಚ್ಚಳವಾಗಿದೆ.

ಪಾಲಿಕೆಯ ೧೯೮ ವಾರ್ಡ್‌ಗಳ ಪೈಕಿ ೧೮೭ ಕಡೆ ತಲಾ ೫೦ಕ್ಕಿಂತ ಹೆಚ್ಚು ಸೋಂಕಿತರು ಇದ್ದಾರೆ. ಸೋಂಕಿತರ ಪೈಕಿ ಶೇ ೮೦ರಷ್ಟು ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.