ಬೆಂಗಳೂರಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಘೋಷಣೆ: ಹಾಸಿಗೆ ಮೀಸಲು ಕಡ್ಡಾಯ

ಬೆಂಗಳೂರು,ಏ.೨೨- ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರಿ, ಖಾಸಗಿ, ವೈದ್ಯಕೀಯ ಕಾಲೇಜುಗಳ ಆಸ್ಪತ್ರೆ ಮತ್ತು ಇತರ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಬೆಂಗಳೂರಿನಲ್ಲಿರುವ ಎಲ್ಲ ೧೩ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ರೋಗಿಗಳ ಮತ್ತು, ತಾಯಿ-ಮಗುವಿನ ಹಾಸಿಗೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸುವಂತೆ ಆದೇಶ ಹೊರಡಿಸಲಾಗಿದೆ ಎಂದರು. ಇದರಿಂದ ಇನ್ನು ೩-೪ ದಿನಗಳಲ್ಲಿ ಸುಮಾರು ೭ ಸಾವಿರ ಹಾಸಿಗೆಗಳು ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಿಗಲಿದೆ ಎಂದರು.
ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳು ತುರ್ತು ಚಿಕಿತ್ಸೆಯ ಹಾಸಿಗೆಗಳನ್ನು ಹೊರತುಪಡಿಸಿ ಐಸಿಯು ಬೆಡ್ ಸೇರಿದಂತೆ ಶೇ. ೮೦ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿರಿಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದರು.
ಈ ಎಲ್ಲ ಆಸ್ಪತ್ರೆಗಳಿಗೆ ಸರ್ಕಾರ ನಿಗದಿಪಡಿಸಿರುವ ದರದಲ್ಲೇ ಚಿಕಿತ್ಸೆ ನೀಡಬೇಕು. ರಾಜ್ಯಸರ್ಕಾರವೇ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ ಎಂದರು.
ಇನ್ನು ೩-೪ ದಿನಗಳಲ್ಲಿ ಈ ಹಾಸಿಗೆಗಳನ್ನು ವೈದ್ಯಕೀಯ ಕಾಲೇಜುಗಳು ಹಾಗೂ ಖಾಸಗಿ ಆಸ್ಪತ್ರೆಗಳು ಹಸ್ತಾಂತರ ಮಾಡಬೇಕು. ಈ ಸಂಬಂಧ ಎಲ್ಲರ ಜತೆ ಸಭೆ ನಡೆಸುವುದಾಗಿಯೂ ಅವರು ಹೇಳಿದರು.
ಕೊರೊನಾ ನಾಗಾಲೋಟದಿಂದ ಸಾಗಿದೆ ಇಂತಹ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಚಿಕಿತ್ಸೆಯಿಲ್ಲದೆ ಸಾವನ್ನಪ್ಪುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಹಾಗಾಗಿ, ಹಾಸಿಗೆ ಸಾಮರ್ಥ್ಯಗಳನ್ನು ಹೆಚ್ಚಳ ಮಾಡಲೇಬೇಕಿದೆ ಎಂದು ಅವರು ಹೇಳಿದರು.
ವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ಮುಖ್ಯಸ್ಥರಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿರಿಸಿ ಮನವಿ ಮಾಡುತ್ತೇನೆ ಎಂದರು.
ಬೆಂಗಳೂರಿನಲ್ಲಿ ೩೦ ಹಾಸಿಗೆಗಳಿಗಿಂತ ಕಡಿಮೆ ಇರುವ ಆಸ್ಪತ್ರೆಗಳು ಕಡ್ಡಾಯವಾಗಿ ನಾನ್ ಕೋವಿಡ್ ರೋಗಿಗಳ ಚಿಕಿತ್ಸೆ ಮಾತ್ರ ಮಾಡಬೇಕು. ೩೦ ಹಾಸಿಗೆಗಳ ಮೇಲೆ ಇರುವ ಆಸ್ಪತ್ರೆಗಳಲ್ಲಿ ಶೇ. ೮೦ ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿರಿಸಬೇಕು. ಇದರಲ್ಲಿ ಜನರಲ್ ಬೆಡ್ ಅಲ್ಲದೆ ಐಸಿಯು, ವೆಂಟಿಲೇಟರ್, ಹೆಚ್‌ಡಿಯು, ಹೆಚ್‌ಎಫ್‌ಎನ್‌ಸಿ ಹಾಸಿಗೆಗಳೂ ಸೇರಿವೆ ಎಂದರು.
ಬೆಂಗಳೂರಿನ ೮ ವಲಯಗಳಲ್ಲೂ ೨ ಸಾವಿರ ಐಸಿಯು ಬೆಡ್‌ಗಳನ್ನು ನಿರ್ಮಿಸಲು ತಾತ್ಕಾಲಿಕವಾಗಿ ಆಪತ್ರೆಗಳನ್ನು ಸಥಾಪಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ೮ ವಲಯಗಳಲ್ಲಿ ಕನಿಷ್ಠ ೨೦೦ ಐಸಿಯು ಬೆಡ್‌ಗಳನ್ನು ತಾತ್ಲಾಲಿಕ ಆಸ್ಪತ್ರೆಗಳಲ್ಲಿ ನಿರ್ಮಿಸಲಾಗುವುದು. ಆ ಕೆಲಸ ನಡೆದಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಂಕಿತರ ಚಿಕಿತ್ಸೆಗೆ ಸಊಕ್ತ ನಿರ್ದೇಶನ ನೀಡಿದ್ದಾರೆ. ಸಿಎಮ ಆದಿಯಾಗಿ ಪ್ರತಿಯೊಬ್ಬರು ದಿನದ ೨೪ ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಜನ ಆತ್ಮವಿಶ್ವಾಶ ಕಳೆದುಕೊಳ್ಳಬಾರದು. ಜನರ ಆರೋಗ್ಯ ರಕ್ಷಣೆಗೆ ಸರ್ಕಾರದ ಬದ್ಧತೆ ಎಂದರು.
ಆರಂಭದಲ್ಲಿ ಕೆಲವು ನ್ಯೂನತೆಗಳಾಗಿವೆ. ಅದನ್ನು ಸರಿ ಮಾಡುತ್ತಿದ್ದೇವೆ. ಬೆಂಗಳೂರಿಗೆ ೪೦ ಮೆಟ್ರಿಕ್ ಟನ್ ಅಡಿಇ॑ನಲ್ ಆಕ್ಸಿಜನ್ ಬೇಕಾಗಿದೆ. ಈಗಾಗಲೇ ೪೦,೫೦೦ ಜಂಭೋ ಸಿಲಿಂಡರ್ ಬಂದಿದೆ ಎಂದರು.
ಶುದ್ಧ ಗಾಳಿಯಲ್ಲಿ ಆಕ್ಸಿಜನ್‌ನ್ನು ಶುದ್ಧ ಮಾಡಿ ಕೋವಿಡ್ ರೋಗಿಗಳಿಗೆ ಒದಗಿಸುವ ಉಪಕರಣಗಳನ್ನು ತರಿಸಲಾಗುತ್ತಿದೆ. ಈ ಉಪಕರಣಗಳಿಂದ ಗಾಳಿಯಲ್ಲಿರುವ ಆಕ್ಸಿಜನ್‌ನಿಂದ ಕಾನ್ಸನ್‌ಟ್ರೇಟ್ ಮಾಡಿ ರೋಗಿಗಳಿಗೆ ಆಕ್ಸಿಜನ್ ನೀಡಲು ಸಾಧ್ಯ. ಈ ನಿಟ್ಟಿನಲ್ಲೂ ಸರ್ಕಾರ ಗಮನ ಹರಿಸಿದೆ ಎಂದರು.
ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ತಮ್ಮ ಮಾಲೀಕತ್ವದ ಬಿಎಲ್‌ಡಿಇ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ ಸರ್ಕಾರ ಪ್ರತಿ ರೋಗಿಗೆ ಪ್ರತಿ ದಿನ ಚಿಕಿತ್ಸೆಗೆ ೧೦ ಸಾವಿರ ರೂ. ದರ ನಿಗದಿ ಮಾಡಿದ್ದರೂ ಅದನ್ನು ಮತ್ತೆ ಕಡಿಮೆ ಮಾಡಿ ೩ ಸಾವಿರ ರೂ.ಗಳಷ್ಟೆ ಶುಲ್ಕ ಪಡೆಯುತ್ತಿದ್ದಾರೆ. ಇದೇ ರೀತಿ ಬೇರೆ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು ಸಹಕರಿಸಬೇಕು. ಇದರಿಂದ ಎಲ್ಲರಿಗೂ ಚಿಕಿತ್ಸೆ ನೀಡಲು ಸಾಧ್ಯ ಎಂದರು.