ಬೆಂಗಳೂರಲ್ಲಿ ಕೊರೊನಾ ಅಬ್ಬರ

ಬೆಂಗಳೂರು, ಏ.೨- ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಎರಡನೇ ಅಲೆ ಸ್ಫೋಟಗೊಂಡಿದ್ದು, ಬರೋಬ್ಬರಿ ೩,೫೧೫ ಕೋವಿಡ್ ಪ್ರಕರಣಗಳು ಶುಕ್ರವಾರ ಬೆಳಕಿಗೆ ಬಂದಿರುವುದು ನಗರದ ಜನತೆ ಬೆಚ್ಚಿ ಬೀಳುವಂತಾಗಿದೆ.

ಕಳೆದ ಎರಡು ದಿನಗಳಲ್ಲಿ ಮೂರು ಸಾವಿರ ಕೋವಿಡ್ ಪ್ರಕರಣ ಏರಿಕೆ ಕಂಡು ಬೆಚ್ಚಿಬಿದ್ದಿದ್ದ ನಗರ ಇಂದು ಮತ್ತೊಂದು ಆಘಾತ ಎದುರಾಗಿದ್ದು, ನಗರದಲ್ಲಿ ಬರೋಬ್ಬರಿ ೩,೫೧೫ ಪ್ರಕರಣಗಳು ದೃಢಪಟ್ಟಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ

ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಇದಾಗಿದೆ. ನಿತ್ಯ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕ ಮನೆಮಾಡಿದೆ. ಜನರ ಓಡಾಟವೇ ಇದಕ್ಕೆ ಮೂಲ ಕಾರಣ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳು ಹಾಗೂ ಅರವತ್ತು ವರ್ಷ ಮೇಲ್ಪಟ್ಟವರು ಅನಗತ್ಯವಾಗಿ ಹೊರಗೆ ಓಡಾಡದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ಸಭೆ ಸಮಾರಂಭಗಳು, ಗುಂಪುಗೂಡದಂತೆಯೂ ಮನವಿ ಮಾಡಲಾಗಿದೆ.ಆದರೂ, ಜನದಟ್ಟಣೆಯ ಸಾಮಾನ್ಯವಾಗಿರುವ ಕಾರಣ ಕೊರೋನಾ ಎತಡನೇ ಅಲೆ ವೇಗವಾಗಿ ಹರಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಿನ್ನೆಯೂ ಹೆಚ್ಚಳ: ಕಳೆದ ೨೪ ಗಂಟೆಗಳ ಮಾಹಿತಿ ಪ್ರಕಾರ ನಗರದಲ್ಲಿ ೨೯೨೮ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ೧೮ ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ೪,೩೪,೮೨೭ಕ್ಕೆ ಏರಿಕೆಯಾಗಿದೆ. ೮೭೯ ಮಂದಿ ಗುಣಮುಖರಾಗಿದ್ದು ಇದುವರೆಗೂ ಒಟ್ಟು ೪,೧೦,೫೯೪ ಮಂದಿ ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಿದ್ದು, ೧೯,೬೧೩ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ೧೨೬ ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ ೪,೬೧೯ಕ್ಕೆ ಏರಿಕೆಯಾಗಿದೆ.

ವಿದ್ಯಾರ್ಥಿಗಳಿಗೆ ಕೊರೋನಾ: ಇನ್ನು, ಬೊಮ್ಮನಹಳ್ಳಿ ವಲಯದ ಎಚ್‌ಎಸ್‌ಆರ್ ಬಡಾವಣೆಯಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಶಾಲೆಯ ೧೩ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಸೋಂಕಿತ ವಿದ್ಯಾರ್ಥಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿರನ್ನು ಪತ್ತೆ ಮಾಡಲಾಗಿದ್ದು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಮಕ್ಕಳ ಪೋಷಕರು, ಶಾಲಾ ಶಿಕ್ಷಕ ಸಿಬ್ಬಂದಿಗೂ ಕೂಡ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಸೋಂಕಿತರ ಸಂಪರ್ಕದಲ್ಲಿ ಇದ್ದವರಿಗೆ ಏಳು ದಿನಗಳ ನಂತರ ಮತ್ತೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ತಿಳಿಸಲಾಗಿದೆ. ಅಲ್ಲದೇ ಕಂಟೈನ್ಮೆಂಟ್ ಝೋನ್ ಸುತ್ತಮುತ್ತ ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ.