ಬೆಂಗಳೂರು, ಏ.೨೫- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಅಚ್ಚರಿಯ ದಿನವಾಗಿದ್ದು, ಜನರ ನೆರಳು ಕೆಲಕಾಲ ಮಾಯವಾಗಲಿದೆ. ಇದನ್ನು “ಶೂನ್ಯ ನೆರಳು ದಿನ” ಎಂದು ಕರೆಯಲಾಗುತ್ತಿದೆ.
ಇಂದು ಮಧ್ಯಾಹ್ನ ೧೨.೧೫ರ ಸುಮಾರಿಗೆ ಈ ಘಟನೆ ನಡೆಯುತ್ತದೆ. ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಸೂರ್ಯನು ಯಾವುದೇ ವಸ್ತುವಿಗೆ ನೆರಳು ನೀಡುವುದಿಲ್ಲ. ಇದರಿಂದಾಗಿ ಈ ಘಟನೆ ಸಂಭವಿಸಲಿದೆ.
ಕರ್ಕಾಟಕ ರಾಶಿ ಮತ್ತು ಮಕರ ರಾಶಿ ವೃತ್ತದ ನಡುವೆ ಇರುವ ಜನರು ಈ ಶೂನ್ಯ ನೆರಳಿನ ದಿನಕ್ಕೆ ವರ್ಷಕ್ಕೆರಡು ಬಾರಿ ಸಾಕ್ಷಿಯಾಗುತ್ತಾರೆ. ಈ ವಿದ್ಯಾಮಾನ ಈ ವರ್ಷ ಏಪ್ರಿಲ್ ೨೫ರಂದು ಕಾಣ ಸಿಗಲಿದೆ ಎಂದು ಖಗೋಳ ಭೌತ ಶಾಸ್ತ್ರಜ್ಞ ದೇಬಿಪ್ರಸೋದ್ ದುರೈ ಹೇಳಿದ್ದಾರೆ.
ಇದು ವರ್ಷದಲ್ಲಿ ಎರಡು ಬಾರಿ ಸಂಭವಿಸುತ್ತದೆ. ಉತ್ತರಾಯಣ ಮತ್ತು ದಕ್ಷಿಣಾಯಣದಲ್ಲಿ ತಲಾ ಒಂದು ಬಾರಿ ಇದು ನಡೆಯುತ್ತದೆ ಎಂದೂ ಅವರು ಉಲ್ಲೇಖಿಸಿದರು.
ಭೂಮಿಯ ಪರಿಭ್ರಮಣ ಅಕ್ಷವು ಸೂರ್ಯನ ಸುತ್ತ ತನ್ನ ಕಕ್ಷೆಗೆ ೨೩.೫ ಡಿಗ್ರಿಗಳಷ್ಟು ವಾಲುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂದರೆ ಹಗಲಿನಲ್ಲಿ ಸೂರ್ಯನು ಉಚ್ಛ್ರಾಯ ಸ್ಥಿತಿಯಲ್ಲಿರುತ್ತಾನೆ. ಈ ಪರಿಭ್ರಮಣೆಯಿಂದಾಗಿ, ಉತ್ತರಾಯಣ ಮತ್ತು ದಕ್ಷಿಣಾಯಣದಲ್ಲಿ ನಮ್ಮ ನೆರಳು ನಮಗೆ ಕಾಣುವುದಿಲ್ಲ.
ಅಲ್ಲದೆ, ಈ ಆಸಕ್ತಿದಾಯಕ ಮತ್ತು ವಿಶಿಷ್ಟ ವಿದ್ಯಮಾನವು ಸ್ವಲ್ಪ ಸಮಯದವರೆಗೆ ಸಂಭವಿಸುತ್ತದೆ. ಇದರ ಸಮಯ ಸುಮಾರು ಒಂದರಿಂದ ಒಂದೂವರೆ ನಿಮಿಷಗಳವರೆಗೆ ಇರುತ್ತದೆ. ಈ ಘಟನೆ ಒಡಿಶಾದ ಭುವನೇಶ್ವರದಲ್ಲಿ ೨೦೨೧ ರಲ್ಲಿ ನಡೆದಿತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ.