ಬೆಂಗಳೂರಲ್ಲಿ ಕಿಲ್ಲರ್ ಅಂಡರ್ ಪಾಸ್: ಪ್ರಾಣಕ್ಕೆ ಕುತ್ತು

ಬೆಂಗಳೂರು, ಆ.೩೦-ರಾಜ್ಯ ರಾಜಧಾನಿ ಬೆಂಗಳೂರಿನ ಕಿಲ್ಲರ್ ಅಂಡರ್‌ಪಾಸ್(ಕೆಳಸೇತುವೆ) ತಲೆ ಎತ್ತಿದ್ದು, ಅಸಮರ್ಪಕ ಸೇತುವೆಗಳ ಮೂಲಕ ಸಾಗಲು ವಾಹನ ಸವಾರರು ತಮ್ಮ ಪ್ರಾಣವನ್ನೆ ಒತ್ತೆಇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖವಾಗಿ ನಗರದ ಜಯಮಹಲ್ ರಸ್ತೆ ಆರಂಭದಲ್ಲಿರುವ ರೈಲ್ವೇ ಕೆಳಸೇತುವೆಯೂ ಅತ್ಯಂತ ಕಳಪೆಯಾಗಿದ್ದು, ಅಲ್ಲಿನ ಕಬ್ಬಿಣದ ಸರಳುಗಳು ಕಿತ್ತುಬಂದಿವೆ. ಇದರ ಮೇಲೆ ವಾಹನಗಳು ಅದರಲ್ಲೂ ಬೈಕ್ ಸವಾರರು ಸಾಗಲು ಕಷ್ಟಕರವಾಗಿದ್ದು, ಸ್ವಲ್ಪ ನಿಯಂತ್ರಣ ತಪ್ಪಿದರೂ ಪ್ರಾಣಕ್ಕೆ ಕುತ್ತು ಬರುವ ಅಪಾಯವಿದೆ. ಈ ಬಗ್ಗೆ ಸಾರ್ವಜನಿಕರು, ವಾಹನ ಸವಾರರು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದರೂ, ಇದುವರೆಗೂ ಯಾವುದೇ ಬದಲಾವಣೆ ಆಗಿಲ್ಲ. ಆನಂತರ, ವಾಹನ ಸವಾರರೇ ಕಿತ್ತುಬಂದ ಕಬ್ಬಿಣದ ಸರಳುಗಳ ಮೇಲೆ ಪ್ಲಾಸ್ಟಿಕ್ ಬ್ಯಾರಿಕೇಡ್ ಹಾಕಿ, ಎಚ್ಚರವಹಿಸುವಂತೆ ಸೂಚಿಸಿದ್ದಾರೆ. ಇನ್ನೊಂದೆಡೆ ಇದರ ಮೇಲೆ ವಾಹನ ಸಾಗಿದರೆ, ಭಾರೀ ಕರ್ಕಶ ಶಬ್ದ ಕೇಳಿಬರುತ್ತಿದೆ. ಮೇಲ್ಸುತುವೆ ಸಾಗಿರುವ ರೈಲಿಗಿಂತಲೂ ಕೆಳಸೇತುವೆಯ ಕಬ್ಬಿಣದ ಸರಳುಗಳ ಶಬ್ದವೇ ಅಧಿಕವಾಗಿದೆ. ಪ್ರಾಣ ಹೋದರೂ, ಸರಿಯಾಗಿಲ್ಲ: ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಸುರಿದಿದ್ದ ಧಾರಾಕಾರ ಮಳೆಯಿಂದ ಕೆ.ಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ಹೈದರಾಬಾದ್ ಮೂಲದ ಇನ್ಫೋಸಿಸ್ ಉದ್ಯೋಗಿ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ವಿಪರ್ಯಾಸ ಎಂದರೆ, ಈಗಲೂ ಈ ಕೆಳಸೇತುವೆ ಸಮರ್ಪಕವಾಗಿ ದುರಸ್ಥಿ ಹೊಂದಿಲ್ಲ. ಒಂದು ವೇಳೆ ಮಳೆ ನೀರು ತುಂಬಿದರೆ ಜಳಚರಂಡಿಗೆ ವೇಗವಾಗಿ ಹೋಗಬೇಕೆಂದು ಬಿಬಿಎಂಪಿ ಅಧಿಕಾರಿಗಳು ಅದರ ಕಬ್ಬಿಣದ ಕಬ್ಬಿಣದ ಸರಳುಗಳನ್ನೆ ತೆಗೆದಿದ್ದಾರೆ.ಆದರೆ, ಇದರಿಂದ ವಾಹನ ಸವಾರರು ಕಷ್ಟಕ್ಕೆ ಸಿಲುಕಿದ್ದು, ಇದರ ಮೇಲೆ ಬೈಕ್‌ಗಳು ಸಾಗಿದರೆ ಬೀಳುವ, ಚಕ್ರವೇ ಹಾನಿಯಾಗುತ್ತಿರುವುದು ಕಂಡುಬರುತ್ತಿದೆ. ಕಬ್ಬಿಣದ ಸರಳು ಸೂಕ್ತ ರೀತಿಯಲ್ಲಿ ತೆಗೆಯದ ಕಾರಣ, ವಾಹನದ ಚಕ್ರಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗುತ್ತಿವೆ. ಈ ಸಂಬಂಧ ದೂರುಗಳು ಬಂದರೂ ಪಾಲಿಕೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಬಾಕ್ಸ್.. ದೂರು ಬಂದರೆ, ಸರಿ ಮಾಡುತ್ತೇವೆ:ಆಯುಕ್ತ ಕೆಳಸೇತುವೆ ದುರಸ್ಥಿ ಕುರಿತು ದೂರುಗಳು ಬಂದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಇನ್ನೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ೩೬ ಕೆಳಸೇತುವೆಗಳು ಬರಲಿವೆ. ರೈಲ್ವೇ ವ್ಯಾಪ್ತಿಯಲ್ಲಿ ೧೬ ಕೆಳಸೇತುವೆ ಇದೆ. ಹಾಗಾಗಿ, ಇದರ ನಿರ್ವಹಣೆಗಾಗಿ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. -ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ