ಬೆಂಗಳೂರಲ್ಲಿ ಇನ್ನೆರೆಡು ದಿನ ಮಳೆ

ಬೆಂಗಳೂರು, ಮಾ ೧೮- ಉದ್ಯಾನನಗರಿ ಬೆಂಗಳೂರಿನಲ್ಲಿ ನಿನ್ನೆ ಮಳೆ ಸುರಿದಿದೆ.
ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಕಳೆದರಡು ದಿನಗಳಿಂದ ಸುರಿದ ಮಳೆಯಿಂದ ವಾತಾವರಣ ಮತ್ತಷ್ಟು ತಂಪಾಯಿತು. ರಾಜಧಾನಿಯಲ್ಲಿ ಇನ್ನೂ ಎರಡು ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಗಲು ವೇಳೆಯಲ್ಲಿ ಮೋಡ ಕವಿದ ವಾತಾವರಣ ಇತ್ತು. ನಗರದ ಹಲವು ಪ್ರದೇಶದಲ್ಲಿ ರಾತ್ರಿ ೮ ಗಂಟೆಯ ವೇಳೆಗೆ ಮತ್ತೆ ಮಳೆ ಆರಂಭವಾಯಿತು. ಕೆಲವು ಬಡಾವಣೆಗಳಲ್ಲಿ ರಭಸವಾಗಿ ಮಳೆ ಸುರಿಯಿತು
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇಂದು ಆನೇಕಲ್, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಿದೆ. ಸತತ ಎರಡನೇ ದಿನವೂ ಸಂಜೆ ವೇಳೆಗೆ ಬೆಂಗಳೂರಿನ ಕೋರಮಂಗಲ, ಕೆಂಗೇರಿ, ಆಡುಗೋಡಿ, ವಿಲ್ಸನ್ ಗಾರ್ಡನ್, ಬನಶಂಕರಿ, ಲಾಲ್ಬಾಗ್, ಕುಮಾರಸ್ವಾಮಿ ಲೇಔಟ್, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಕೆಆರ್ ಮಾರ್ಕೆಟ್, ಶ್ರೀನಗರ ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ. ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದ ಸಾರ್ವಜನಿಕರು ಮಳೆಯಿಂದ ಸಮಸ್ಯೆ ಎದುರಿಸಿದ್ದಾರೆ.
ಕೆಂಗೇರಿ ಭಾಗದಲ್ಲಿ ಮಳೆ ಅರ್ಧ ತಾಸಿಗೂ ಹೆಚ್ಚು ಕಾಲ ರಭಸದಿಂದ ಸುರಿಯಿತು.ಚನ್ನಸಂದ್ರ, ರಾಜೇಶ್ವರಿ ನಗರ, ಗಾಣಕಲ್ಲು, ಕರಿಯನಪಾಳ್ಯ, ಹೆಮ್ಮಿಗೆಪುರ, ಬಾಬಾ ಸಾಹೇಬರ ಪಾಳ್ಯ ಸೇರಿದಂತೆ ಮೈಸೂರು ರಸ್ತೆಯಲ್ಲಿ ಮಳೆಯ ಆರ್ಭಟ ಜೋರಾಗಿತ್ತು.
ಟಿ.ದಾಸರಹಳ್ಳಿ, ಪೀಣ್ಯ, ಜಾಲಹಳ್ಳಿ, ಸುಂಕದಕಟ್ಟೆ, ಯಶವಂತಪುರ, ನಾಗಸಂದ್ರ, ನೆಲಮಂಗಲ ವ್ಯಾಪ್ತಿ, ಮರಿಯಪ್ಪನಪಾಳ್ಯ, ಬಿ.ಇ.ಎಲ್, ಮತ್ತೀಕೆರೆ ಹಾಗೂ ದೇವನಹಳ್ಳಿ ಭಾಗದಲ್ಲಿ ಜೋರು ಗುರುವಾರವೂ ಮಳೆ ಸುರಿದಿತ್ತು.
ಕೋಲಾರ ಜಿಲ್ಲೆಯಾದ್ಯಂತ ಇಂದು ಕೂಡ ಭಾರೀ ಗಾಳಿಯೊಂದಿಗೆ ಗುಡುಗು ಮಿಂಚು ಸಹಿತ, ಸುಮಾರು ಒಂದು ಗಂಟೆ ಸಮಯ ಕಾಲ ಮಳೆಯಾಗಿದೆ. ನಿನ್ನೆ ಆಲಿಕಲ್ಲು ಸುರಿದು ಭಾರೀ ನಷ್ಟಕ್ಕೆ ಒಳಗಾಗಿದ್ದ ಜಿಲ್ಲೆಯ ಮಾವು ಬೆಳೆಗಾರರು ಹಾಗೂ ರೈತರು ಮತ್ತಷ್ಟು ನಷ್ಟ ಎದುರಿಸುವ ಆತಂಕದಲ್ಲಿದ್ದಾರೆ.
ಉತ್ತರ ಒಳನಾಡಿನ ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಯ ಅಲ್ಲಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ.