ಬೆಂಗಳೂರಲ್ಲಿ ಇನ್ನೆರಡು ದಿನ ಮಳೆ

ಬೆಂಗಳೂರು,ಮೇ.೩೧-ರಾಜ್ಯದ ರಾಜಧಾನಿಯ ಜನತೆಗೆ ಹವಾಮಾನ ಇಲಾಖೆ ಮುಂಗಾರು ಮಳೆಯ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.
ಜೂನ್ ೨ರವರೆಗೆ ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ೪೦ ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಎಂಜಿನಿಯರ್ ಗಳು, ಎಚ್ಚೆತ್ತುಕೊಳ್ಳಬೇಕು ಎಂದು ಡಿಸಿಎಂ ಡಾ. ಶಿವಕುಮಾರ್ ಸೂಚನೆ ನೀಡಿ, ಮಳೆ ಅನಾಹುತ ತಪ್ಪಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಯಾವುದೇ ಅನಾಹುತಗಳು ಸಂಭವಿಸಿದಾಗ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.ಅದರಂತೆ ಮಳೆಯಿಂದಾಗಿ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಬಿಬಿಎಂಪಿ ಯಂತ್ರೋಪಕರಣಗಳನ್ನು ಸಿದ್ಧಪಡಿಸುತ್ತಿದೆ ಎಂದು
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೂಚನೆಯಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎಲ್ಲಾ ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕ್ಷೇತ್ರದಲ್ಲಿ ಹೆಚ್ಚು ಜಾಗರೂಕರಾಗಿಸಲು ಮತ್ತು ಮಳೆಯ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ. ಯಾವುದೇ ಸಮಯದಲ್ಲಿ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಯಂತ್ರೋಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ.ಉಪ ಮುಖ್ಯಮಂತ್ರಿಗಳ ಆದೇಶದಂತೆ ವಲಯದಿಂದ ಉಪ ವಿಭಾಗ ಮಟ್ಟಕ್ಕೆ ಕಂಟ್ರೋಲ್ ರೂಂಗಳು ದಿನದ ೨೪ ಗಂಟೆ ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಸಲಕರಣೆಗಳು, ವಾಹನಗಳು ಮತ್ತು ಇತರ ಸಾಮಗ್ರಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಯಾವುದೇ ಸಿಬ್ಬಂದಿ ನಿರ್ಲಕ್ಷ್ಯ, ಆಲಸ್ಯ ಅಥವಾ ಬೇಜವಾಬ್ದಾರಿ ತೋರಿದರೆ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನೈರುತ್ಯ ಮುಂಗಾರು ಮಾರುತಗಳು ಬೀಸುತ್ತಿರುವ ಕಾರಣ ಈ ವರ್ಷ ದೇಶದಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಉತ್ತಮ ಮಳೆಯಾಗಲಿದೆ. ಈ ಬಾರಿ ದೇಶದಲ್ಲಿ ೯೬% ರಿಂದ ೧೦೪% ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.ಮೇ ೩೦ರಿಂದ ಜೂನ್ ತಿಂಗಳ ಮೊದಲ ಎರಡು ದಿನಗಳಲ್ಲಿ ಮುಂಗಾರು ಕೇರಳ ಕರಾವಳಿ ಪ್ರವೇಶಿಸಬೇಕಿತ್ತು. ಈ ವರ್ಷ ಜೂನ್ ೪ರ ನಂತರ ನಾಲ್ಕು ದಿನಗಳ ತಡವಾಗಿ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.