ಬೀದರ್: ಮಾ.26:ವಿದ್ಯುತ್ ಶಾಟ್ ಸಕ್ರ್ಯೂಟ್‍ನಿಂದ ಸಂಭವಿಸಿದ ಬೆಂಕಿ ದುರಂತದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತ ಪರಿವಾರಕ್ಕೆ ನೆರವಾಗುವ ಮೂಲಕ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಮಾನವೀಯತೆ ಮೆರೆದಿದ್ದಾರೆ.
ನಗರದ ರಾಜಗೊಂಡ ಕಾಲೋನಿಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಅಲೆಮಾರಿ ಸಮುದಾಯಕ್ಕೆ ಸೇರಿರುವ ಧರಂ ಎಂಬುವರ ಮನೆ ಸಂಪೂರ್ಣವಾಗಿ ಸುಟ್ಟಿ ಹೋಗಿತ್ತು. ಪಾತ್ರೆಗಳು, ಮನೆ ಬಳಕೆ ವಸ್ತುಗಳು, ಬಟ್ಟೆ, ಮೊಬೈಲ್ ಮುಂತಾದವು ಸುಟ್ಟಿದ್ದವು.
ಸ್ಥಳಕ್ಕೆ ಭೇಟಿ ನೀಡಿದ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಸಂತ್ರಸ್ತ ಪರಿವಾರಕ್ಕೆ ಸಾಂತ್ವನ ಹೇಳಿದರು. ವೈಯುಕ್ತಿಕವಾಗಿ ಆರ್ಥಿಕ ನೆರವು ನೀಡಿದರು. ಸರಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಕಷ್ಟದಲ್ಲಿದ್ದವರಿಗೆ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ. ಸರಕಾರದ ಸೌಲಭ್ಯಗಳನ್ನೂ ತಲುಪಿಸಲಾಗುತ್ತಿದೆ. ಕಷ್ಟದಲ್ಲಿ ಸಿಲುಕಿದವರು ಧೈರ್ಯ ಕಳೆದುಕೊಳ್ಳಬಾರದು ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ಹೇಳಿದರು.
ಸೂರ್ಯಕಾಂತ್ ಅವರ ಸಕಾಲಿಕ ನೆರವಿಗೆ ಬಡಾವಣೆ ನಿವಾಸಿಗಳು ಕೃತಜ್ಞತೆ ಸಲ್ಲಿಸಿದರು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯವನ್ನು ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಬಡವರ ಬಗ್ಗೆ ಅವರಿಗಿರುವ ಕಳಕಳಿ ಅನುಕರಣೀಯವಾಗಿದೆ ಎಂದು ಹೇಳಿದರು.
ಪ್ರಮುಖರಾದ ವಿಶಾಲ್, ವಿಕಾಸ್, ಶಾಂತಕುಮಾರ ಹಳ್ಳದಕೇರಿ ಮತ್ತಿತರರು ಉಪಸ್ಥಿತರಿದ್ದರು.