ಬೆಂಕಿ ಜತೆ ಸರಸ ಬೇಡ ಯು.ಎಸ್ ಗೆ ಚೀನಾ ಎಚ್ಚರಿಕೆ

ನ್ಯೂಯಾರ್ಕ್, ಜು.೨೯- ಅಮೆರಿಕಾ ಹಾಗೂ ಚೀನಾ ನಡುವಿನ ವೈಷಮ್ಯ ಮತ್ತಷ್ಟು ತೀವ್ರಗೊಂಡಿರುವ ನಡುವೆಯೇ ಇದೀಗ ಅಧ್ಯಕ್ಷ ಜೋ ಬೈಡೆನ್ ಹಾಗೂ ಕ್ಸಿ ಜಿನ್‌ಪಿಂಗ್ ನಡುವೆ ಮುಖಾಮುಖಿ ಭೇಟಿಗೆ ಸಮಯ ಸನ್ನಿಹಿತವಾಗಿದೆ. ಇದರ ನಡುವೆ ಗುರುವಾರ ನಡೆದ ವರ್ಚುವಲ್ ಮಾತುಕತೆಯಲ್ಲಿ ಎರಡೂ ನಾಯಕರು ಕಠಿಣ ಶಬ್ದ ಪ್ರಯೋಗಳ ಮೂಲಕ ಗಮನ ಸೆಳೆದರು.
ಅಮೆರಿಕಾದ ಸ್ಪೀಕರ್ ಆಗಿರುವ ನಾನ್ಸಿ ಪೆಲೋಸಿ ಮುಂದಿನ ಕೆಲ ದಿನಗಳಲ್ಲಿ ತೈವಾನ್‌ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಈಗಾಗಲೇ ಚೀನಾ ಅಮೆರಿಕಾಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ. ಒಂದು ವೇಳೆ ತೈವಾನ್‌ಗೆ ಭೇಟಿ ನೀಡಿದರೆ ಪೆಲೋಸಿಯ ವಿಮಾನವನ್ನೇ ಧ್ವಂಸಗೊಳಿಸಲಾಗುವುದು ಎಂಬ ಬೆದರಿಕೆಯನ್ನು ಚೀನಾ ಒಡ್ಡಿತ್ತು. ಸದ್ಯ ಈ ಮಾತು ಅಮೆರಿಕಾವನ್ನು ಮತ್ತಷ್ಟು ಕೆರಳಿಸುವಂತೆ ಮಾಡಿತ್ತು. ಇನ್ನು ನಿನ್ನೆ ನಡೆದ ವರ್ಚುವಲ್ ಮಾತುಕತೆಯ ವೇಳೆ ಕೂಡ ಇದೇ ವಿಚಾರ ಪ್ರಸ್ತಾಪವಾಗಿತ್ತು. ಈ ವೇಳೆ ಪ್ರತಿಕ್ರಿಯೆ ನೀಡಿರುವ ಜಿನ್‌ಪಿಂಗ್, ಬೆಂಕಿಯ ಜೊತೆ ಆಡುವವರ ಸುಟ್ಟು ಹೋಗಲಿದ್ದಾರೆ. ಈ ವಿಚಾರದಲ್ಲಿ (ತೈವಾನ್) ಅಮೆರಿಕಾಗೆ ಸ್ಪಷ್ಟತೆ ಇದೆ ಎಂಬ ಭಾವನೆ ಇದೆ. ?ಒನ್ ಚೈನಾ? ನೀತಿಗೆ ಅಮೆರಿಕಾ ಬದ್ಧವಾಗಿರಬೇಕು. ತೈವಾನ್ ಮೇಲೆ ಹೊರಗಿನವರ ಹಸ್ತಕ್ಷೇಪ ನಾವು ಸಹಿಸಲಾರೆವು. ತೈವಾನ್ ಸ್ವಾತಂತ್ರ್ಯವನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೈಡೆನ್, ತೈವಾನ್ ಕುರಿತಾದ ಅಮೆರಿಕಾದ ನೀತಿಯಲ್ಲಿ ಬದಲಾವಣೆಯಿಲ್ಲ. ತೈವಾನ್‌ನ ಥಾಸ್ಥಿತಿಯನ್ನು ಬದಲಾಯಿಸುವ ಅಥವಾ ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡುವ ಏಕಪಕ್ಷೀಯ ಪ್ರಯತ್ನಗಳನ್ನು ಅಮೆರಿಕಾ ಬಲವಾಗಿ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಎರಡೂ ನಾಯಕರು ತೀಕ್ಷ್ಣ ಮಾತುಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಕೆಲದಿನಗಳಲ್ಲಿ ಎರಡೂ ನಾಯಕರು ಮುಖಾಮುಖಿ ಭೇಟಿಯಾಗಲಿದ್ದಾರೆ ಎನ್ನಲಾಗಿದ್ದು, ದಿನಾಂಕ ಇನ್ನೂ ಹೊರಬಿದ್ದಿಲ್ಲ.