ಬೆಂಕಿ ಆಕಸ್ಮಿಕ 13 ಕೋವಿಡ್ ರೋಗಿಗಳು ಸಾವು

ಮುಂಬೈ, ಏ, ೨೩- ಮಹಾರಾಷ್ಟ್ರದ ನಾಸಿಕ್‌ನ ಕೋವಿಡ್ ಆಸ್ಪತ್ರೆಯಲ್ಲಿ ಮುಂದೆ ಆಮ್ಲಜನಕ ಪೂರೈಕೆ ಮಾಡುವ ಟ್ಯಾಂಕರ್ ಸೋರಿಕೆಯಾಗಿ ಆಮ್ಲಜನಕ ಸಿಗದೆ ೨೪ ಮಂದಿ ಪ್ರಾಣಕಳೆದುಕೊಂಡ ಘಟನೆ ಹಸಿರಾಗಿರುವ ನಡುವೆಯೇ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕದಿಂದ ೧೩ ಕೋವಿಡ್ ರೋಗಿಗಳು ಸಾವನ್ನಪ್ಪಿರುವ ಘಟನೆ ಮುಂಬೈನ ವಸೈ ವಿಹಾರ್‌ನಲ್ಲಿ ಮುಂಜಾನೆ ನಡೆದಿದೆ.
ವಿಜಯ್ ವಲ್ಲಭ ಖಾಸಗಿ ಆಸ್ಪತ್ರೆಯ ಐಸಿಯು ಘಟಕದ ಏರ್ ಕಂಡೀಷನರ್‌ನಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ ೧೩ ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಮೃತಪಟ್ಟವರ ಪೈಕಿ ಐದು ಮಹಿಳೆಯರೂ ಹಾಗೂ ೮ ಮಂದಿ ಪುರುಷರು ಇದ್ದಾರೆ, ೨೩ ವರ್ಷದ ಯುವಕ ಸೇರಿ ೬೮ ವರ್ಷದ ವೃದ್ಧರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮುಂಜಾನೆ ೩.೧೫ರ ಸುಮಾರಿಗೆ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ೧೩ ಮಂದಿ ಸಾವನ್ನಪ್ಪಿದ್ದರು. ಬೆಂಕಿ ಅವಗಢದಿಂದ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಜೊತೆಗೆ ಬೆಂಕಿಯಿಂದ ಈ ದುರ್ಘಟನೆ ನಡೆದಿದೆ ಎಂದು ಅಗ್ನಿ ಶಾಮಕ ಇಲಾಖೆಯ ಮುಖ್ಯ ಅಧಿಕಾರಿ ದಿಲೀಪ್ ಪಲಾವ್ ತಿಳಿಸಿದ್ದಾರೆ.
ಐಸಿಯು ಘಟಕದಲ್ಲಿ ೧೭ ಮಂದಿ ಚಿಕಿತ್ಸೆ ಪಡೆಯುತ್ತಿದ್ದರು.ಅದರಲ್ಲಿ ೧೩ ಮಂದಿ ಮೃತಪಟ್ಟಿದ್ದಾರೆ ಮೃತಪಟ್ಟವರು ಯಾರು ಎನ್ನುವ ಗುರುತು ಸಿಗುತ್ತಿಲ್ಲ. ಬೆಂಕಿ ಅವಘಡದಲ್ಲಿ ಮೃತಪಟ್ಟವರ ಹೆಸರನ್ನು ವಸೈ ವಿಹಾರ್ ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇತರೆ ರೋಗಿಗಳ ಸ್ಥಳಾಂತರ:

ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು ಅವಘಢ ಸಂಭವಿಸಿ ೧೩ ಮಂದಿ ಪ್ರಾಣ ಕಳೆದುಕೊಂಡ ಘಟನೆಯ ಬಳಿಕ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದವರು ಸೇರಿದಂತೆ ಇನ್ನಿತರೆ ರೋಗಿಗಳನ್ನು ಬೇರೆ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ದಿಲೀಪ್ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ೧೦ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿವೆ.ಅಷ್ಟರೊಳಗಾಗಿ ೧೩ ಮಂದಿ ಮೃತಪಟ್ಟಿದ್ದರು ಎಂದು ಅವರು ಹೇಳಿದ್ದಾರೆ.
ಘಟನೆಯ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರತ್ಯಕ್ಷದರ್ಶಿ ಅವಿನಾಶ್ ಪಾಟೀಲ್, ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷತಾ ಸಾಧನ ಅಳವಡಿಸಿಕೊಳ್ಳದಿರುವುದು ಘಟನೆಗೆ ಕಾರಣ. ಹಲವು ಅಗ್ನಿ ಶಾಮಕ ವಾಹನ ಬಂದರೂ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ.ಇಬ್ಬರು ದಾದಿಯರು ಐಸಿಯುನಲ್ಲಿ ಇದ್ದರು. ಸ್ನೇಹಿತನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸುವ ಬೆಳಗ್ಗೆ ಬಂದಾಗ ಬೆಂಕಿ ಹೊತ್ತಿಕೊಂಡಿರುವು ಕಂಡು ಬಂತು ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಏರ್ ಕಂಡೀಷನ್‌ರಲ್ಲಿ ಬೆಂಕಿ ಅವಘಡ

೧೩ ಮಂದಿ ಕೋವಿಡ್ ರೋಗಿಗಳು ಸಾವು

೫ ಮಹಿಳೆಯರು ೮ ಪುರುಷರು ಸಾವು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ವಸೈ ವಿಹಾರ್ ಖಾಸಗಿ ಆಸ್ಪತ್ರೆಯಲ್ಲಿ ಅವಘಡ

ಸ್ಥಳಕ್ಕೆ ೧೦ ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳ ಆಗಮನ

ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷತಾ ಸಾಧನ ಇಲ್ಲದಿರುವುದೇ ದುರ್ಘಟನೆಗೆ ಕಾರಣ.

ಸೋಂಕಿತರ ಸಾವು ಪ್ರಧಾನಿ ಸಂತಾಪ
ನವದೆಹಲಿ,ಏ.೨೩- ಮಹಾರಾಷ್ಟ್ರದ ವಸೈ ವಿಹಾರದ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡದಿಂದ ಮೃತಪಟ್ಟ ಕೋವಿಡ್ ಸೋಂಕಿತರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡ ಮಂದಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಕೂಡ ಬೆಂಕಿ ದುರಂತದಲ್ಲಿ ಮೃತಪಟ್ಟ ಸೋಂಕಿತರಿಗೆ ಸಂತಾಪ ಸೂಚಿಸಿ ಗಾಯಾಳುಗಳಿ ಶೀಘ್ರ ಚೇರಿಸಿಕೊಳ್ಳಲಿ ಎಂದಿದ್ದಾರೆ.

೫ ಲಕ್ಷ ಪರಿಹಾರ:

ಬೆಂಕಿ ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ ೫ ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮಹಾರಾಷ್ಟ್ರದ ಸಚಿವ ಏಕ್ ನಾಥ್ ಶಿಂಧೆ ಹೇಳಿದ್ದಾರೆ.’
ಇದೊಂದು ದೊಡ್ಡ ದುರಂತವಾಗಿದೆ. ಆಸ್ಪತ್ರೆ ಕೂಡ ಜವಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಇಂದು ಮುಂಜಾನೆ ಸಂಭವಿಸಿದ ಅಗ್ನಿ ದುರುಂತದಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಪೈಕಿ ಕನಿಷ್ಠ ೧೩ ಮಂದಿ ಮೃತಪಟ್ಟು ಹಲವರು ತೀವ್ರ ಗಾಯಗೊಂಡಿದ್ದರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.