
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.6 :- ಬೆಂಕಿ ಆಕಸ್ಮಿಕದಿಂದ ಒಂದೇ ಕಣದಲ್ಲಿರುವ ಮೇವಿನ ಬಣವೆಗಳು ಸುಟ್ಟಿರುವ ಘಟನೆ ತಾಲೂಕಿನ ಅಮಲಾಪುರದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಸುಂಕದಕಲ್ಲು ಈರಣ್ಣ ಅವರ 1 ಗಾಡಿ ಶೇಂಗಾ ಉಬ್ಬುಲು ಹಾಗೂ ಟ್ರಾಕ್ಟರ್ ಲೋಡ್ ನಷ್ಟು ಮೆಕ್ಕೆಜೋಳದ ಸೊಪ್ಪೆ ಹಾಗೂ ಅಗ್ರಹಾರದ ನಿಂಗಪ್ಪ, ಮರಿಯಪ್ಪಗಳ ಮಂಜುನಾಥ, ಬಾನಪ್ಪಗಳ ಮಲ್ಲೇಶ್ ಅವರ 14 ಲೋಡ್ ಮೆಕ್ಕೆಜೋಳದ ಸೊಪ್ಪೆ ಬಣವೆಗಳು ಬೆಂಕಿಗೆ ಆಹುತಿಯಾಗಿವೆ.
ಒಂದೇ ಕಣದಲ್ಲಿದ್ದ ನಾಲ್ವರು ರೈತರಿಗೆ ಸೇರಿದ ಮೇವಿನ ಬಣವೆಗಳಿಗೆ ಬೆಂಕಿ ತಗುಲಿದ್ದು, ಒಟ್ಟು 80 ಸಾವಿರ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಿದ್ದು,ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ ಕೊಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.