ಬೆಂಕಿ ಅವಘಡ ಐದು ಕೋಟಿ ನಷ್ಟ

ಬೆಂಗಳೂರು,ಏ. ೨೪-ನಗರದ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್ ಕಂಟ್ರಿ ರಸ್ತೆಯಲ್ಲಿರುವ ಟಿಂಬರ್ ಯಾರ್ಡ್‌ನಲ್ಲಿ ನಿನ್ನೆ ಮಧ್ಯರಾತ್ರಿ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ರೂಗಳ ನಷ್ಟ ಸಂಭವಿಸಿದೆ.
ಕಟ್ಟಿಗೆಗಳನ್ನು ಸಂಗ್ರಹ ಮಾಡಿದ್ದ ಟಿಂಬರ್ ಯಾರ್ಡ್‌ನಲ್ಲಿ ಮಧ್ಯರಾತ್ರಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಕಾರ್ ವಾಶ್ ರೂಂಗೆ ತಗುಲಿದೆ. ಬಳಿಕ ಲೋವಬಲ್ ಸ್ಪೋರ್ಟ್ ಹೆಸರಿನ ಗಾರ್ಮೆಂಟ್ಸ್ ಫ್ಯಾಕ್ಟರಿಗೂ ಹಬ್ಬಿದೆ.
ದಟ್ಟ ಬೆಂಕಿ ಹೊಗೆ ಹೊರಬರುತ್ತಿರುವುದನ್ನು ಕಂಡು ಒಂದರಿಂದ ಒಂದರಂತೆ ೬ ಆಗ್ನಿ ಶಾಮಕ ವಾಹನಗಳು ಧಾವಿಸಿ ಬೆಂಕಿ ಮುಂಜಾನೆವರೆಗೆ ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.
ಬೆಂಕಿ ತಗುಲಿದ ಪರಿಣಾಮ ೫ ಕೋಟಿಗೂ ಹೆಚ್ಚು ಮೌಲ್ಯದ ಬಟ್ಟೆ ನಾಶವಾಗಿದೆ.
ವಾಹನ ವಾಶ್ ಕೇಂದ್ರದಲ್ಲಿದ್ದ ೪೦ಕ್ಕೂ ಹೆಚ್ಚು ಬೈಕ್‌ಗಳು ಬಿಎಂಡಬ್ಲ್ಯು ಕಾರು ಭಸ್ಮವಾಗಿದೆ. ಅದೃಷ್ಟವಶಾತ್ ಅಗ್ನಿ ಅವಘಡದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.