ಬೆಂಕಿ ಅನಾಹುತಗಳ ಕುರಿತು ವಿಶೇಷ ಉಪನ್ಯಾಸ

ಕೆ.ಆರ್.ಪೇಟೆ.ಏ:19: ಬೆಂಕಿ ಅವಘಡಗಳು ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಾಗಿದ್ದು ಸೂಕ್ತವಾಗಿ ನಿರ್ವಹಣೆ ಮಾಡದಿದ್ದರೆ ಹೆಚ್ಚಿನ ಪ್ರಮಾಣದ ಅನಾಹುತಗಳು ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಶಿವಣ್ಣ ತಿಳಿಸಿದರು.
ಅವರು ಅಗ್ನಿಶಾಮಕ ಸಪ್ತಾಹ-2021 ಅಂಗವಾಗಿ ಪಟ್ಟಣದ ಸರ್ಕಾರಿ ಮೆಟ್ರಿಕ್‍ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಗೆ ಬೆಂಕಿ ಅನಾಹುತಗಳ ಕುರಿತು ಉಪನ್ಯಾಸ ಹಾಗೂ ಅಣಕು ಪ್ರದರ್ಶನವನ್ನು ಏರ್ಪಡಿಸಿ ಮಾತನಾಡಿ, ಅಗ್ನಿಶಾಮಕ ಸಿಬ್ಬಂದಿಗಳು ದಿನದ 24 ಗಂಟೆಯೂ ಸರ್ವ ಸನ್ನದ್ಧವಾಗಿದ್ದು ಬೆಂಕಿ, ವಿದ್ಯುತ್, ಗ್ಯಾಸ್, ನೀರು ಮುಂತಾದವುಗಳಿಂದ ಸಂಭವಿಸಿದ ಅವಘಡಗಳಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಕಾರ್ಯಾಚರಣೆ ಮಾಡುತ್ತಾರೆ. ಕೆಲವು ಕಾರ್ಯಾಚರಣೆಗಳು ಎಂಟು ಹತ್ತು ಗಂಟೆಗಳ ಧೀರ್ಘವಾಗಿರುತ್ತವೆ. ಅಂಥಹ ಸಮಯದಲ್ಲಿಯೂ ಉತ್ಸಾಹ, ಆಸಕ್ತಿ ಕಳೆದುಕೊಳ್ಳದೇ ಹಿಡಿದ ಕೆಲಸವನ್ನು ಸಾಧಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಶ್ರಮವಹಿಸಿ ಕೆಲಸ ಮಾಡುತ್ತಾರೆ. ಸಾರ್ವಜನಿಕರು ತಾಲ್ಲೂಕಿನಲ್ಲಿ ಸಂಭವಿಸುವ ವಿದ್ಯುತ್, ಬೆಂಕಿ, ಗ್ಯಾಸ್ ಮುಂತಾದ ಅವಘಡಗಳ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಠಾಣೆಗೆ ಕರೆಮಾಡಿ ಆಗಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಬೇಕು.
ಗ್ಯಾಸ್, ಬೆಂಕಿ ಅನಾಹುತಗಳು ಸಂಭವಿಸುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಅಗ್ನಿ ಸುರಕ್ಷತೆಯ ಬಗ್ಗೆ ಅಣಕು ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಬೆಂಕಿ ಅವಘಢಘಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲಾಯಿತು.
ವಿದ್ಯಾರ್ಥಿನಿಲಯದ ವಾರ್ಡನ್ ಮಹಾದೇವಮ್ಮ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೋಮಶೇಖರಗೌಡ, ಪ್ರಮೋದ, ಶ್ರೀಕಾಂತ್, ಸಂತೋಷ ಸೇರಿದಂತೆ ಹಲವರು ಹಾಜರಿದ್ದರು.