ಬೆಂಕಿಗೆ ೨೫ ಮನೆ ಆಹುತಿ

ಜಮ್ಮು,ಅ.೨೮- ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ೨೫ ಮನೆಗಳು ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಿಶ್ತ್ವಾರ್ ಜಿಲ್ಲೆಯ ಇಸ್ತಿಯಾರಿ ಮತ್ತು ಗಾಂಧಾರಿ ಪ್ರದೇಶದಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ಆಕಸ್ಮಿಕಕ್ಕೆ ಕಾರಣ ಗೊತ್ತಾಗಿಲ್ಲ. ಈ ಬೆಂಕಿ ಅವಘಡದಿಂದ ೨೫ ಮನೆಗಳು ಸಂಪೂರ್ಣ ಸುಟ್ಟಿವೆ. ಅಪಾರ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ.
ಬೆಂಕಿ ಆಕಸ್ಮಿಕದ ಸುದ್ದಿ ತಿಳಿಯುತ್ತಿದ್ದಂತೆಯೇ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್, ಕಿಸ್ತ್ವಾರ್ ಪೊಲೀಸರು, ಅಗ್ನಿ ಶಾಮಕ ಸೇವೆಗಳು ಮತ್ತು ರೆಡ್‌ಕ್ರಾಸ್ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯ ನಡೆಸಿದರು. ಈ ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡಿರುವವರಿಗೆ ಕೂಡಲೇ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಈ ಬೆಂಕಿ ಅವಘಡದ ಬಗ್ಗೆ ತನಿಖೆ ನಡೆದಿದ್ದು, ತನಿಖೆಯಿಂದ ಕಾರಣ ಗೊತ್ತಾಗಲಿದೆ.