ಬೃಹತ್ ಮೈಸೂರು ಮಹಾನಗರಪಾಲಿಕೆ ಅನಿವಾರ್ಯ

ಮೈಸೂರು: ನ.20:- ಮೈಸೂರಿಗೆ ಹೊಂದಿಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಹಲವು ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದರೆ ಬೃಹತ್ ಮಹಾನಗರ ಪಾಲಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಮೈಸೂರಿನ ರಿಂಗ್ ರಸ್ತೆಯಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಹಾಗೂ ಎಲ್ ಇ ಡಿ ಬಲ್ಬ್ ಗಳ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಶನಿವಾರ ಕಾಮಗಾರಿ ವೀಕ್ಷಣೆ ಮಾಡಿ ಬಳಿಕ ಮಾತನಾಡಿದರು. ಮೈಸೂರನ್ನು ಬೃಹತ್ ಮಹಾನಗರಪಾಲಿಕೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಬೆಂಗಳೂರಿನಂತೆ ಮೈಸೂರಿನಲ್ಲಿ ಸಮಸ್ಯೆಗಳು ಎದುರಾಗಬಾರದು. ಹಾಗಾಗಿ ವ್ಯವಸ್ಥಿತವಾಗಿ ಮೈಸೂರು ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆ ಮಾಡಲು ಯೋಜನೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದರು.
ರಿಂಗ್ ರಸ್ತೆಯ ದೇವೇಗೌಡ ವೃತ್ತದಿಂದ ವೀಕ್ಷಣೆ ಆರಂಭಿಸಿ ರಸ್ತೆಯುದ್ದಕ್ಕೂ ಸಂಚರಿಸಿ ವೀಕ್ಷಣೆ ಮಾಡಿದರು.
ಮೈಸೂರಿನ ರಿಂಗ್ ರಸ್ತೆಯಲ್ಲಿ ನವೆಂಬರ್ 30ರೊಳಗೆ ಬೀದಿದೀಪ ಅಳವಡಿಕೆ ಕಾಮಗಾರಿ ಮುಗಿಸುವುದಾಗಿ ಜನರಿಗೆ ಆಶ್ವಾಸನೆ ನೀಡಿದ್ದೆ. ಹಾಗಾಗಿ ಇಂದು ಕಾಮಗಾರಿ ವೀಕ್ಷಣೆ ಮಾಡಿದ್ದೇನೆ. ಪ್ರತಿನಿತ್ಯ 300 ದೀಪಗಳನ್ನು ಅಳವಡಿಸಲಾಗುತ್ತಿದೆ.
ಈ ಸಂಖ್ಯೆ 400ಕ್ಕೆ ಹೆಚ್ಚಳವಾದರೆ ಖಂಡಿತವಾಗಿಯೂ ನವೆಂಬರ್ 30ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಡಿಸೆಂಬರ್ 1 ಅಥವಾ 2ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆ ಮಾಡಿಸುತ್ತೇನೆ. ಆ ಮೂಲಕ ಸಾರ್ವಜನಿಕರಿಗೆ ನೀಡಿದ್ದ ನೀಡಿರುವ ಆಶ್ವಾಸನೆಯನ್ನು ಈಡೇರಿಸುತ್ತೇನೆ ಎಂದು ತಿಳಿಸಿದರು.
ಸಮಸ್ಯೆಗಳ ಆಗರ ಮೈಸೂರು ವಿವಿ:
ಮೈಸೂರು ವಿಶ್ವವಿದ್ಯಾನಿಲಯ ಸಮಸ್ಯೆಗಳ ಆಗರವಾಗಿದೆ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ ಸಂಸದ ಪ್ರತಾಪ್ ಸಿಂಹ, ಕೆ-ಸೆಟ್ ಪರೀಕ್ಷೆಯಲ್ಲೂ ಅಕ್ರಮ ನಡೆಯುತ್ತಿತ್ತು. ಓಎಂಆರ್ ಶೀಟ್ ಗೋಲ್ ಮಾಲ್ ನಡೆಯುತ್ತಿತ್ತು. ಕೆ-ಸೆಟ್ ಪರೀಕ್ಷೆ ಮಾಡಲು ಒಂದು ಸಮಿತಿ ರಚಿಸಬೇಕು.
ಹಾಗಾದರೆ ಆ ಸಮಿತಿ ಎಲ್ಲಿದೆ? ಓಎಂಆರ್ ಶೀಟ್ ಸ್ಕ್ಯಾನಿಂಗ್ ಮಾಡಬೇಕು, ಬಯೋಮೆಟ್ರಿಕ್ ಅಳವಡಿಸಬೇಕು, ಸ್ಟ್ರಾಂಗ್ ರೂಮ್ ನಲ್ಲಿ ಸಿಸಿಟಿವಿ ಇರಬೇಕು. ಓಎಂಆರ್ ಶೀಟುಗಳನ್ನು ಸುರಕ್ಷಿತವಾಗಿ ಇಡಬೇಕು.ಆದರೆ ಇದ್ಯಾವುದನ್ನು ಪಾಲಿಸದಿರುವುದನ್ನು ಯುಜಿಸಿ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ಮೈಸೂರು ವಿವಿಗೆ 1300 ಮಂದಿ ಡಿ ಗ್ರೂಪ್ ನೌಕರರು ಏಕೆ ಬೇಕು. ಇತರ ಸಿಬ್ಬಂದಿಗೆ ಹೋಲಿಸಿದರೆ ಡಿ ಗ್ರೂಪ್ ನೌಕರರು ಹೆಚ್ಚಿದ್ದಾರೆ. 800 ಮಂದಿ ನೇಮಕಕ್ಕೆ ಮಾತ್ರ ಅವಕಾಶ ಇದೆ. ಅದಕ್ಕಿಂತ ಹೆಚ್ಚು ಏಕೆ ನೇಮಕ ಮಾಡಲಾಗಿದೆ. ಇದರಿಂದ ವಿವಿ ಗೆ ಹೊರೆಯಲ್ಲವೇ? ಎಂದು ಪ್ರಶ್ನಿಸಿದರು.
ಮೈಸೂರು ವಿವಿಯಿಂದ ಚಾಮರಾಜನಗರ, ಮಂಡ್ಯ, ಹಾಸನ ಬೇರ್ಪಡುತ್ತಿವೆ. ಪರಿಣಾಮ ಮೈಸೂರು ವಿವಿ ಗೆ ಆದಾಯವಿಲ್ಲದಂತಾಗುತ್ತದೆ. ಹಾಗಾಗಿ ಮಿತಿಮೀರಿದ ನೇಮಕಾತಿ ಏಕೆ ಮಾಡಲಾಗಿದೆ. ಒಟ್ಟಾರೆಯಾಗಿ ಮೈಸೂರು ವಿಶ್ವವಿದ್ಯಾನಿಲಯ ಸಮಸ್ಯೆಗಳ ಆಗರವಾಗಿದೆ ಎಂದರು.
ಮಾರ್ಚ್ ವೇಳೆಗೆ ಪೂರ್ಣ: ಮೈಸೂರು-ಬೆಂಗಳೂರು ಹೈವೇ ಕಾಮಗಾರಿ ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಹೈವೇ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ, ಮೂರ್ನಾಲ್ಕು ಕಡೆ ಅಡಚಣೆಯಾಗಿದೆ. ಜನರು ಅಂಡರ್ ಪಾಸ್, ಓವರ್ ಬ್ರಿಡ್ಜ್, ಪರ್ಯಾಯ ಮಾರ್ಗದ ಬೇಡಿಕೆ ಇಟ್ಟಿದ್ದರಿಂದ ಅಡಚಣೆ ಆಗಿದೆ.
ಬೂದನೂರು, ಇಂಡುವಾಳು, ಪಾಂಡವರಪುರ, ಹನಕೆರೆ ಮೊದಲಾದ ಸ್ಥಳಗಳನ್ನು ಬಿಟ್ಟು ಉಳಿದೆಡೆ ಕಾಮಗಾರಿ ತ್ವರಿತವಾಗಿ ನಡೆದಿದೆ. ಮದ್ದೂರು ಫ್ಲೈ ಓವರ್, ಶ್ರೀರಂಗಪಟ್ಟಣ ಬೈಪಾಸ್ ನವೆಂಬರ್ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ. ಮಂಡ್ಯ ಬೈಪಾಸ್ ಡಿಸೆಂಬರ್ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದರು. ಈ ವೇಳೆ ಶಾಸಕ ಅಶ್ವಿನ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಸೇರಿ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.