ಬೃಹತ್ ನೀರುಗಾಲುವೆ ಅವ್ಯವಹಾರ ತನಿಖೆಗೆ ಆಗ್ರಹ

ಬೆಂಗಳೂರು, ಮಾ.೧೫- ಬೃಹತ್ ನೀರುಗಾಲುವೆಗೆ ಸಂಬಂಧಿಸಿದಂತೆ ಬಹುಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ನಿಯಮಬಾಹಿರ ಕಾರ್ಯಗಳು ನಡೆದಿದ್ದು,ಈ ಸಂಬಂಧ ಸೂಕ್ತ ತನಿಖೆ ಕೋರಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ತಿಳಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ -೧೦೦, ಕೋರಮಂಗಲ ಕಣಿವೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದ ೧೫೧ ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ನಿಯಮಬಾಹಿರ ಕಾರ್ಯಗಳು ನಡೆದಿದ್ದು, ಟೆಂಡರ್ ಷರತ್ತುಗಳಿಗೆ ಸಂಬಂಧಿಸಿದ ಕೆಲವೊಂದು ಅಂಶಗಳಲ್ಲಿ ಅರ್ಹತೆ ಇಲ್ಲದಂತಹ ಪೂರ್ವ ನಿಗದಿತ ಗುತ್ತಿಗೆದಾರನೊಬ್ಬನಿಗೆ ಟೆಂಡರ್ ಅನುಮೋದನೆ ದೊರಕಿಸಿಕೊಡುವ ಕಾರ್ಯ ನಡೆಯುತ್ತಿದೆ ಎಂದು ದೂರಿದರು.
ಇದಲ್ಲದೇ ಆರ್ಥಿಕ ಸಂಕಷ್ಟದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಣಕಾಸು ಸ್ಥಿತಿಗೆ ಹೊರೆಯಾಗುವಂತಹ ಮತ್ತೊಂದು ಕಾರ್ಯಕ್ಕೆ ಬೃಹತ್ ನೀರುಗಾಲುವೆ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದು, ೧೫೧ ಕೋಟಿ ಮೊತ್ತದ ಈ ಕಾಮಗಾರಿಗೆ ಗುತ್ತಿಗೆದಾರನಿಗೆ ಶೇ.೧೭.೪೭ ರಷ್ಟು ಹೆಚ್ಚು ಮೊತ್ತವನ್ನು ಪಾವತಿಸುವುದಾಗಿ.
ಅಂದರೆ ಸುಮಾರು ೩೦ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಪಾವತಿಸುವ ಸಂಬಂಧದ ಕಡತವನ್ನೂ ಸಹ ಅನುಮೋದನೆಗಾಗಿ ನಗರಾಭಿವೃಧ್ಧಿ ಇಲಾಖೆಗೆ ಕಳುಹಿಸಲಾಗಿರುವುದೂ ಸಹ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವ ಕಾರಣ ಈ ಟೆಂಡರ್ ಪ್ರಕ್ರಿಯೆಯನ್ನು ಕೈಬಿಟ್ಟು ಹೊಸದಾಗಿ ಟೆಂಡರ್ ಆಹ್ವಾನಿಸುವಂತೆ ಅವರು ಒತ್ತಾಯಿಸಿದರು.
ಈ ಹಗರಣ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಪಾಲಿಕೆಯ ಆಡಳಿತಾಧಿಕಾರಿಗಳಿಗೆ ದಾಖಲೆಗಳ ಸಹಿತ ದೂರನ್ನು ಸಲ್ಲಿಸಲಾಗಿದೆ ಎಂದರು.