ಬೃಹತ್ ದಂಡ ತೆರಲು ಒಪ್ಪಿದ ಜ್ಯಾಕ್ ಮಾ!

ಬೀಚಿಂಗ್, ಎ.೧೨- ಚೀನಾದ ಏಕಸ್ವಾಮ್ಯ ವಿರೋಧಿ ನಿಯಂತ್ರಕ ವಿಧಿಸಿದ್ದ ಬರೊಬ್ಬರಿ ೨.೮ ಬಿಲಿಯನ್ ಡಾಲರ್ (೨೧ ಸಾವಿರ ಕೋಟಿಗೂ ಹೆಚ್ಚು) ಮೊತ್ತದ ದಂಡವನ್ನು ತೆರಲು ಆಲಿ ಬಾಬಾ ಕಂಪೆನಿ ಇದೀಗ ಒಪ್ಪಿಗೆ ಸೂಚಿಸಿದೆ. ಅಲ್ಲದೆ ತನ್ನ ನೀತಿಯಲ್ಲಿ ಚೀನಾದ ಕಾನೂನಿನ್ವಯ ಬದಲಾವಣೆಯನ್ನು ತರಲು ಸಮ್ಮತಿ ಸೂಚಿಸಿದ್ದಾರೆ.
ಆಲಿ ಬಾಬಾ ಕಂಪೆನಿಯು ಚೀನಾದ ನೀತಿಗಳನ್ನು ಗಾಳಿಗೆ ತೂರಿದ್ದಲ್ಲದೆ ಹಲವು ನಿಯಮಗಳನ್ನು ಉಲ್ಲಂಘಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪೆನಿಗೆ ಬರೊಬ್ಬರಿ ೨.೮ ಬಿಲಿಯನ್ ಡಾಲರ್ ದಂಡ ವಿಧಿಸಲಾಗಿತ್ತು. ದಂಡವು ೨೦೧೯ರ ವೇಳೆಯ ಕಂಪೆನಿಯ ಆದಾಯದ ೪ ಪ್ರತಿಶತದಷ್ಟಿದೆ. ಇದೀಗ ಆ ದಂಡವನ್ನು ತೆರಲು ಆಲಿ ಬಾಬಾ ಒಪ್ಪಿದ್ದು, ಅಲ್ಲದೆ ತನ್ನ ಸಂಸ್ಥೆಯಲ್ಲಿ ಬದಲಾವಣೆಯನ್ನು ತರಲು ಸಮ್ಮತಿಸಿದ್ದಾರೆ.