ಬೃಹತ್ ಗಾತ್ರದ ಹೆಬ್ಬಾವಿನ ರಕ್ಷಣೆ

ಮಂಜೇಶ್ವರ, ನ.೯- ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಸ್ಥಳೀಯ ಯುವಕರು ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದ ಘಟನೆ ಮಂಜೇಶ್ವರದಲ್ಲಿ ನಿನ್ನೆ ರಾತ್ರಿ ನಡೆದಿದೆ.


ಈ ಹೆಬ್ಬಾವು ಸುಮಾರು ೭ರಿಂದ ೮ ಅಡಿ ಉದ್ದವಿದ್ದು, ಮನೆಯೊಂದರ ಬೆಕ್ಕೊಂದನ್ನು ತನ್ನ ಕಬಂಧ ಬಾಹುಗಳಿಂದ ಸುತ್ತಿ, ಕೊಂದು ನುಂಗುವ ಯತ್ನದಲ್ಲಿತ್ತು. ಜನವಸತಿ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ನಾಗರಿಕರಿಗೂ ಇದರಿಂದ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮಂಜೇಶ್ವರದ ಕೀರ್ತೇಶ್ವರ ನಿವಾಸಿ ಜಿತೇಶ್ ಎಂಬವರ ನೇತೃತ್ವದ ತಂಡ ಹೆಬ್ಬಾವನ್ನು ಹಿಡಿದು, ಸ್ಥಳೀಯ ಗುಡ್ಡ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ.