ಬೂಸ್ಟರ್ ಲಸಿಕೆ ಪಡೆಯಿರಿ: ಡಿ.ಸಿ ಗೋವಿಂದರೆಡ್ಡಿ

ಬೀದರ್: ಜು.20:ಮೊದಲ ಮತ್ತು ಎರಡನೇ ಕೋವಿಡ್ ಲಸಿಕೆ ಪಡೆದವರು ಕಡ್ಡಾಯವಾಗಿ ಬೂಸ್ಟರ್ ಲಸಿಕೆ ಪಡೆಯಬೇಕು ಇದರಿಂದ ಕೋವಿಡ್ ನಾಲ್ಕನೇ ಅಲೆ ಬಂದರೂ ತಡೆಯಬಹುದು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆರೈಕೆ ಬೀದರ ವತಿಯಿಂದ ಹಮ್ಮಿಕೊಂಡಿದ್ದ 100 ಹಾಸಿಗೆ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾಕರಣ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೂಸ್ಟರ್ ಡೋಸ್ ಪಡೆಯುವುದರಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ, ಯಾರು ಭಯಪಡಬೇಕಾಗಿಲ್ಲ ಕೋವಿಡ್ ನಾಲ್ಕನೇ ಅಲೆ ಬಂದರೂ ತಡೆಗಟ್ಟುವ ಶಕ್ತಿ ಇದಕ್ಕೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಬ್ ಸೆಂಟರಗಳಲ್ಲಿ 75 ದಿನಗಳು ಉಚಿತವಾಗಿ ಈ ಡೋಸ್ ನೀಡಲಾಗುತ್ತದೆ. 25 ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ 9 ಲಕ್ಷ ಬೂಸ್ಟರ್ ಡೋಸ್ ನೀಡಬೇಕಾಗಿದೆ ಎಂದರು.
ಮಳೆಗಾಲ ಆರಂಭವಾಗಿರುವುದರಿಂದ ನಮಗೆ ಹಲವಾರು ಕಾಯಿಲೆಗಳು ಬರುತ್ತವೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವುದರಿಂದ ನಮ್ಮ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ, ಹಾಗಾಗಿ ಮೊದಲ ಮತ್ತು ಎರಡನೇ ಕೋವಿಡ್ ಲಸಿಕೆ ಪಡೆದವರು ಕಡ್ಡಾಯವಾಗಿ ಬೂಸ್ಟರ್ ಡೋಸ್ ಲಸಿಕೆ ಪಡೆಯುವ ಮೂಲಕ ತಮ್ಮ ಆರೋಗ್ಯ ಸುರಕ್ಷತೆ ಸಾರ್ವಜನಿಕರು ಗಮನಕೊಡಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ., ಡಾ.ರಾಜಶೇಖರ ಪಾಟೀಲ, ಡಾ.ಶಿವಶಂಕರ, ಡಾ.ಶರಣಯ್ಯ ಸ್ವಾಮಿ, ಡಾ.ಶಂಕ್ರೇಪ್ಪಾ, ಡಾ.ಕಿರಣ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.