ಬೂದಿ ಮುಚ್ಚಿದ ಕೆಂಡದಂತಿರುವ ಖಾತೆ ಕ್ಯಾತೆ

ಬೆಂಗಳೂರು,ಜ.೨೬- ಸಚಿವ ಸಂಪುಟ ವಿಸ್ತರಣೆ ನಂತರ ನಾಲ್ಕು ಬಾರಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ್ದರೂ ಖಾತೆ ಖ್ಯಾತೆ, ಅಸಮಾಧಾನ ಇನ್ನೂ ತಣ್ಣಗಾಗಿಲ್ಲ. ಮೇಲ್ನೋಟಕ್ಕೆ ಎಲ್ಲವೂ ತಣ್ಣಗಾದಂತೆ ಕಂಡು ಬಂದರೂ ಖಾತೆ ಹಂಚಿಕೆಯ ಅಸಮಾಧಾನ ಅತೃಪ್ತಿ ಬೂದಿ ಮುಚ್ಚಿದ ಕೆಂಡದಂತಿದೆ.
ಸಚಿವರುಗಳಿಗೆ ಒಂದು ವಾರದಲ್ಲಿ ೪ ಬಾರಿ ಖಾತೆ ಬದಲಾಯಿಸಿ ಅಸಮಾಧಾನ-ಅತೃಪ್ತಿಯ ಬೀಸುವ ದೊಣ್ಣೆಯಿಂದ ಸದ್ಯಕ್ಕೆ ಮುಖ್ಯಮಂತ್ರಿಗಳು ಪಾರಾಗಿದ್ದರೂ ಕೆಲ ಸಚಿವರಲ್ಲಿ ಇನ್ನೂ ಉಳಿದಿರುವ ಅತೃಪ್ತಿ-ಮುನಿಸು ಯಾವಾಗ ಬೇಕಾದರೂ ಸ್ಫೋಟವಾಗಬಹುದು,
ಖಾತೆ ಹಂಚಿಕೆಯಿಂದ ಬೇಸರಗೊಂಡು ರಾಜೀನಾಮೆ ನೀಡಲು ಮುಂದಾಗಿದ್ದ ಆನಂದ್‌ಸಿಂಗ್ ಕೆಲ ನಾಯಕರ ರಾಜಿ, ಮಧ್ಯಸ್ಥಿಕೆಯಿಂದ ಸದ್ಯಕ್ಕೆ ಸುಮ್ಮನಾಗಿದ್ದರೂ ಮುಂದೆ ಅವರು ಯಾವ ನಿಲುವು ತೆಗೆದುಕೊಳ್ಳುತ್ತಾರೋ ಈಗಲೇ ಹೇಳಲು ಸಾಧ್ಯವಿಲ್ಲ. ಹಾಗೆಯೇ, ವಲಸಿಗ ಸಚಿವರೂ ಸೇರಿದಂತೆ ಹಲವರಲ್ಲಿ ಖಾತೆ ಹಂಚಿಕೆಯ ಅಸಮಾಧಾನ ಇದ್ದೇ ಇದೆ.
ಮುಂದೆ ಮಾರ್ಚ್‌ನಲ್ಲಿ ಸಚಿವ ಸಂಪುಟ ಪುನಾರಚನೆಯಾಗಲಿದೆ. ಆಗ ಒಳ್ಳೆ ಖಾತೆಗಳನ್ನು ನೀಡಲಾಗುವುದು ಎಂದು ಕೆಲ ಸಚಿವರಿಗೆ ಮೂಗಿನ ಮೇಲೆ ತುಪ್ಪ ಹಚ್ಚುವ ಕೆಲಸವನ್ನೂ ಬಿಜೆಪಿ ನಾಯಕರು ಮಾಡಿ, ಎಲ್ಲರನ್ನೂ ಸಮಾಧಾನಗೊಳಿಸಿರುವರಾದರೂ ಕೊಟ್ಟ ಭರವಸೆ ಈಡೇರದಿದ್ದರೆ ಮತ್ತೆ ಖಾತೆ ಕಂಟಕ ತಪ್ಪಿದ್ದಲ್ಲ.
ಸಂಪುಟ ವಿಸ್ತರಣೆಯಾಗಿ ಒಂದುವಾರದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲವನ್ನೂ ಅಳೆದು, ತೂಗಿ ಸಂಪುಟಕ್ಕೆ ಸೇರ್ಪಡೆಯಾದ ೭ ನೂತನ ಸಚಿವರೂ ಸೇರಿದಂತೆ ೧೭ ಸಚಿವರಿಗೆ ಖಾತೆಗಳನ್ನು ಮರು ಹಂಚಿಕೆ ಮಾಡಿದ್ದರು.
ಖಾತೆಗಳ ಮರು ಹಂಚಿಕೆಯಿಂದ ಕೆಲ ಹಿರಿಯ ಸಚಿವರುಗಳು ಅಸಮಾಧಾನ ಹೊರ ಹಾಕಿದರೆ, ನೂತನ ಸಚಿವರು ಅದರಲ್ಲೂ ವಲಸಿಗ ಸಚಿವರುಗಳು ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದು, ಖಾತೆ ಹಂಚಿಕೆ ಕಗ್ಗಂಟು ಸೃಷ್ಟಿಯಾಗಿತ್ತು. ಖಾತೆ ಹಂಚಿಕೆಯಿಂದ ಉಂಟಾದ ಅತೃಪ್ತಿ, ಅಸಮಾಧಾನವನ್ನು ಶಮನಗೊಳಿಸಲು ಮುಖ್ಯಮಂತ್ರಿಗಳು ೨ನೇ ಬಾರಿಗೆ ವಲಸಿಗ ಸಚಿವರುಗಳಾದ ಎಂ.ಟಿ.ಬಿ ನಾಗರಾಜ್, ಗೋಪಾಲಯ್ಯ, ಆರ್. ಶಂಕರ್, ಕೆ.ಸಿ ನಾರಾಯಣಗೌಡ ಇವರುಗಳ ಖಾತೆಗಳನ್ನು ಅದಲು-ಬದಲು ಮಾಡಿದ್ದರು. ಹಾಗೆಯೇ ಸಚಿವರಾದ ಅರವಿಂದ ಲಿಂಬಾವಳಿ ಅವರಿಗೆ ಕನ್ನಡ ಸಂಸ್ಕೃತಿ, ಮಾಧುಸ್ವಾಮಿ ಅವರಿಗೆ ಹಜ್ ಮತ್ತು ವಕ್ಫ್ ಖಾತೆಗಳನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಇದಾದ ನಂತರವೂ ಸಚಿವರುಗಳ ಖಾತೆ ಅಸಮಾಧಾನ ಮುಂದುವರೆದಿದ್ದು, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ತಮ್ಮಿಂದ ವಾಪಸ್ ಪಡೆದಿರುವ ವೈದ್ಯಕೀಯ ಖಾತೆಯನ್ನು ಮತ್ತೆ ನೀಡುವಂತೆ ಒತ್ತಡ ಹೇರಿದ್ದರು.
ಎರಡು ಬಾರಿ ಖಾತೆ ಹಂಚಿಕೆ ಮಾಡಿದ್ದರೂ ಸಚಿವರ ಅತೃಪ್ತಿ ಮುನಿಸು ಶಮನವಾಗದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆ ಸಂಜೆ ಮತ್ತೆ ಮೂವರು ಸಚಿವರುಗಳಿಗೆ ಖಾತೆ ಮರು ಹಂಚಿಕೆ ಮಾಡಿ ಡಾ. ಕೆ. ಸುಧಾಕರ್ ಅವರಿಗೆ ವೈದ್ಯಕೀಯ ಖಾತೆಯನ್ನು ವಾಪಸ್ ನೀಡಿ ವೈದ್ಯಕೀಯ ಖಾತೆ ಹೊಂದಿದ್ದ ಮಾಧುಸ್ವಾಮಿ ಅವರಿಗೆ ಪ್ರವಾಸೋದ್ಯಮ, ಪರಿಸರ ಖಾತೆ ನೀಡಿದ್ದರು. ಹಾಗೆಯೇ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಹೊಂದಿದ್ದ ಆನಂದ್‌ಸಿಂಗ್ ಅವರಿಗೆ ಮೂಲಭೂತ ಸೌಕರ್ಯ ಹಾಗೂ ಹಜ್ ಮತ್ತು ವಕ್ಫ್ ಖಾತೆಯನ್ನು ಹಂಚಿಕೆ ಮಾಡಿದ್ದು, ಮತ್ತೆ ಅಸಮಾಧಾನ ಸ್ಫೋಟವಾಗಲು ಕಾರಣವಾಗಿ ಸಚಿವರಾದ ಮಾಧುಸ್ವಾಮಿ ಮತ್ತು ಆನಂದ್‌ಸಿಂಗ್ ಇಬ್ಬರು ರಾಜೀನಾಮೆ ನೀಡುವ ಮಟ್ಟಕ್ಕೆ ಅತೃಪ್ತಿ-ಅಸಮಾಧಾನಗಳು ಬಂದು ನಿಂತವು.
ಈ ಬೆಳವಣಿಗೆಯಿಂದ ಎಚ್ಚೆತ್ತ ಮುಖ್ಯಮಂತ್ರಿಗಳು ನಿನ್ನೆ ರಾತ್ರಿಯೇ ೪ನೇ ಬಾರಿಗೆ ಖಾತೆ ಬದಲಾಯಿಸಿ ಮಾಧುಸ್ವಾಮಿ ಅವರಿಗೆ ಅವರು ಹಿಂದೆ ನಿರ್ವಹಿಸುತ್ತಿದ್ದ ಸಣ್ಣ ನೀರಾವರಿ ಖಾತೆಯನ್ನೇ ವಾಪಸ್ ನೀಡಿ ಅವರ ಅಸಮಾಧಾನ-ಮುನಿಸನ್ನು ತಣಿಸುವ ಪ್ರಯತ್ನ ಮಾಡಿದರು. ಸಣ್ಣ ನೀರಾವರಿ ಖಾತೆ ಹೊಂದಿದ್ದ ಸಿ.ಪಿ ಯೋಗೇಶ್ವರ್ ಅವರಿಗೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆಯನ್ನು ನೀಡಿ ಖಾತೆ ಖ್ಯಾತೆಗೆ ತೇಪೆ ಹಚ್ಚುವ ಹರಸಾಹಸ ನಡೆಸಿದ್ದರು.
ಇಷ್ಟೆಲ್ಲಾ ಆದರೂ ಇನ್ನು ಕೆಲ ಸಚಿವರಲ್ಲಿ ಖಾತೆ ಬಗ್ಗೆ ಅತೃಪ್ತಿ -ಮುನಿಸು ಇದ್ದು, ಯಾವಾಗ ಈ ಅತೃಪ್ತ್ತಿಗಳು ಹೊರ ಬರುತ್ತದೋ ಹೇಳಲು ಬಾರದು.