ಬೂದಿ ಗುಡ್ಡಕ್ಕೆ ಗೂಳಿ ಮಾದರಿ ಕಳೆ


ಸಂಜೆವಾಣಿ ವಾರ್ತೆ
ಸಂಡೂರು:ಜ:29: ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 63 ರ ಬಳಿ  ಇರುವ ಐತಿಹಾಸಿಕ ನವಶಿಲಾಯುಗದ ಬೂದಿಗುಡ್ಡದ ಸ್ಥಳಕ್ಕೆ ಬೃಹದಾಕಾರದ ಬಣ್ಣದ ಆಕರ್ಷಕ ನೂತನ ಗೂಳಿಯ ವಿಗ್ರಹಗಳು ಬಂದಿದ್ದರಿಂದ ತೋರಣಗಲ್ಲು ಗ್ರಾಮವನ್ನೊಳಗೊಂಡ ಸುತ್ತಲಿನ ಗ್ರಾಮಗಳ ಜನರು ಸಂತಸಗೊಂಡಿದ್ದಾರೆ. ಇತ್ತೀಚೆಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆಯ ಚಟುವಟಿಕೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಬೂದಿಗುಡ್ಡದ ಸುತ್ತಲೂ ಭದ್ರತಾಗೋಡೆ ವಿಶ್ರಾಂತಿಗಾಗಿ ಆಸನಗಳು ಸ್ವಚ್ಚತೆ ಪಾರ್ಕಿಂಗ್ ವಿದ್ಯುತ್ ಬೆಳಕಿಗಾಗಿ ಸೋಲಾರ್ ಕಂಬಗಳನ್ನು ಅಳವಡಿಸಿ ಅಭಿವೃದ್ದಿ ಪಡಿಸಲಾಗಿದೆ. ಪ್ರವಾಸಿಗಳರ ಅನುಕೂಲಕ್ಕಾಗಿ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ಬೂದಿಗುಡ್ಡದ ಎರಡು ಬದಿಯಲ್ಲಿ 18 ಅಡಿ ಎತ್ತರದ ಎರಡು ನೂತನ ನಂದಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಭರದ ಸಿದ್ದತೆ ನಡೆಸಲಾಗಿತ್ತು. ಅ ಹಿನ್ನಲೆಯಲ್ಲಿ ನೂತನ ಗೂಳಿಯ ವಿಗ್ರಹಗಳನ್ನು ತರಿಸಲಾಗಿದೆ.
ಈ ಎರಡು ಗೂಳಿಯ ವಿಗ್ರಹಗಳನ್ನು ಸಿಗ್ಗಾವಿಯ ರಾಕ್ ಗಾರ್ಡನ ನಿಂದ 15 ಲಕ್ಷ ರೂ ವೆಚ್ಚದಲ್ಲಿ ತರಿಸಲಾಗಿದೆ. ಒಂದು ಗೂಳಿಯ ವಿಗ್ರಹವು 18 ಅಡಿ ಎತ್ತರ 7 ಅಡಿ ಅಗಲದ ವಿನ್ಯಾಸವನ್ನು ಹೊಂದಿದೆ. ಈಗಾಗಲೇ ಬೂದಿ ಗುಡ್ಡದ ಎರಡುಬದಿಯಲ್ಲಿ ಇವುಗಳನ್ನು ಪ್ರತಿಷ್ಠಾಪಿಸಲು ಎತ್ತರದ ಸಿಮೆಂಟ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಕೆಲವರು ಈ ತಾಣದಲ್ಲಿ ವಿಶ್ರಾಂತಿ ಪಡೆದು ಧೂಮಪಾನ, ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಹಾಕುವುದಲ್ಲದೆ ತ್ಯಾಜ್ಯವನ್ನು ಬಿಸಾಡಿ ಅನೈತಿಕ ತಾಣವಾಗಿಸುತ್ತಿದ್ದಾರೆ ಈ ಸ್ಥಳವನ್ನು ನಿರಂತರವಾಗಿ ಸಂರಕ್ಷಣೆ ಮಾಡಲು ಸರರ್ಕಾರವು ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕೆಂದು ಸ್ಥಳೀಯರ ಒತ್ತಾಯವಾಗಿದೆ. ಐತಿಹಾಸಿಕ ಬೂದಿಗುಡ್ಡವು ಪ್ರಸ್ತುತ ದಿನಗಳಲ್ಲಿ ಅಳವಿನ ಅಂಚಿನಲ್ಲಿತ್ತು. ಬಳ್ಳಾರಿ ಜಿಲ್ಲಾಡಳಿತದ ವಿಶೇಷ ಕಾಳಜಿ ಆಸಕ್ತಿಯಿಂದ ಬೂದಿ ಗುಡ್ಡವು ಅಭಿವೃದ್ದಿ ಯಾಗುತ್ತಾ ಸಾಗುತ್ತಿರುವುದು ಸಂತಸದ ವಿಚಾರ ಈ ಭಾಗದಲ್ಲಿ ಪ್ರಜ್ಞಾವಂತ ಜನರು ಈ ಐತಿಹಾಸಿಕ ತಾಣವನ್ನು ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದು ಹಿರಿಯ ಶಾಸ್ತ್ರಜ್ಞ ಕೋರಿ ರವಿಶೆಟ್ಟರು ತಿಳಿಸಿದ್ದಾರೆ.