ಬೂದಿಯಿಂದ ಭಕ್ತರ ಭವಣೆ ನೀಗಿಸಿದ ಗಬ್ಬೂರು ಶ್ರೀ ಬೂದಿ ಬಸವೇಶ್ವರ೨೨೫ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ-ವಿವಿಧ ಮಠದ ಸ್ವಾಮಿಗಳು ಭಾಗಿ

ದೇವದುರ್ಗ.ಫೆ.೧೮- ಗಬ್ಬೂರು ಶ್ರೀಬೂದಿಬಸವೇಶ್ವರ ಸಂಸ್ಥಾನ ಭಕ್ತರ ಆರಾಧ್ಯದೈವ. ಬೂದಿಯಿಂದಲೇ ಭಕ್ತರ ಭವಣೆ ನೀಗಿಸಿದ ಪವಾಡ ಪುರುಷ. ಶ್ರೀ ಮಠಕ್ಕೆ ೪೫೦ವರ್ಷಗಳ ಇತಿಹಾಸವಿದ್ದು, ೧೬ನೇ ಶತಮಾನದಲ್ಲಿ ಶ್ರೀಮಠದ ಸ್ವಾಮೀಜಿಗಳು ಅನೇಕ ಪವಾಡ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೆ ಶ್ರೀಮಠದ ಪೀಠಾಧಿಪತಿಗಳು ಪೂಜೆ ಸಲ್ಲಿಸಿ ಬಾ ಬಸವ ಎಂದು ಮಿಣಿ ಇಲ್ಲದೆ ತೇರು ಎಳೆಯುತ್ತಾರೆ. ಈ ಪವಾಡ ನೋಡಲು ಹೊರಜಿಲ್ಲೆ, ರಾಜ್ಯದಿಂದ ಲಕ್ಷಾಂತರ ಭಕ್ತರು ಸೇರುತ್ತಾರೆ.
೪೫೦ವರ್ಷಗಳ ಹಿಂದೆ ಶ್ರೀಬೂದಿಬಸವೇಶ್ವರ ಹಾಗೂ ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶ್ರೀಮಠ ಸ್ಥಾಪಿಸಿದ್ದಾರೆ. ದೇವಸ್ಥಾನ ೧೨ಕಂಬಗಳ ಉದ್ದ ಹಾಗೂ ೮ ಲಂಬ ಸಾಲು ಒಳಗೊಂಡ ೧೦೮ ಕಂಬಗಳಿಂದ ವಿನ್ಯಾಸ ಮಾಡಲಾಗಿದ್ದು, ಎರಡನೇ ಹಂಪಿ ಎಂದೇ ಪ್ರಖ್ಯಾತಿಪಡೆದಿದೆ. ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ೧೯೯೯ರಲ್ಲಿ ೮ ನೇ ಪೀಠಾಧಿಪತಿಯಾಗಿ ಪಟ್ಟಾಧಿಕಾರ ಸ್ವೀಕರಿಸಿ ೨೫ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಶ್ರೀಶಾಂತಮೂರ್ತಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಆರಂಭಿಸಿ ತ್ರಿವಿಧ ದಾಸೋಹ ಸೇವೆ ಮಾಡುತ್ತಿದ್ದಾರೆ.
ರಂಗಭೂಮಿ ಕಲೆ ಉಳಿಸಿ ಬೆಳೆಸಲು ಶ್ರೀಗಳು ಶಾಂತಮೂರ್ತಿ ನಾಟ್ಯ ಸಂಘ ರಚಿಸಿ ಪ್ರತಿವರ್ಷ ಜಾತ್ರೆಯಂದು ೪ನಾಟಕ ಪ್ರದರ್ಶನ ಕಾಣುತ್ತಿವೆ. ಇದರ ಜತೆಗೆ ಸಿನಿಮಾ ಕಲಾವಿದರು, ಗಾಯಕರು, ಹಾಸ್ಯನಟರು, ಯುವ ಪ್ರತಿಭೆಗೆ ವೇದಿಕೆ ಕಲ್ಪಿಸಿ ಮುಖ್ಯವಾಹಿನಿಗೆ ತರುತ್ತಿದ್ದಾರೆ.
ಮದುವೆ ಮಾಡಿ ನೋಡು, ಮನೆ ಕಟ್ಟಿನೋಡು ಎನ್ನುವಂತೆ ೨೦ವರ್ಷಗಳಿಂದ ಸಾಮೂಹಿಕ ವಿವಾಹ ಆಯೋಜಿಸಿ ಶ್ರೀಮಠ ಬಡವರ ಮನೆಗಳನ್ನು ಬೆಳಗುತ್ತಿದೆ. ದುಬಾರಿ ದುನಿಯಾದಲ್ಲಿ ಮದುವೆ ಮಾಡುವುದು ಬಡವರಿಗೆ ಬಲುಕಷ್ಟ. ಶ್ರೀಮಠ ೨೦೦೪ ರಿಂದ ಸಾಮೂಹಿಕ ವಿವಾಹ ಆಯೋಜಿಸಿ ಮೊದಲ ವರ್ಷ ೬೮ ಜೋಡಿ ಬಾಳಿಗೆ ಬೇಳಕಾಗಿತ್ತು. ವರ್ಷದಿಂದ ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುವವರ ಸಂಖ್ಯೆ ಅಧಿಕವಾಗಿದೆ. ೨೦೧೯ರಲ್ಲಿ ೨೨೬ಜೋಡಿ, ೨೦೨೦ರಲ್ಲಿ ೧೭೫ಜೋಡಿ, ೨೦೨೧ರಲ್ಲಿ ೨೦೦, ೨೦೨೨ರಲ್ಲಿ ೧೯೬, ೨೦೨೩ರಲ್ಲಿ ೨೦೦, ಈ ವರ್ಷ ೨೨೫ ಸೇರಿ ೨೪೬೫ ಜೋಡಿ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ.

ಬಾಕ್ಸ್==========
ಪವಾಡ ಪುರುಷ
೧೭ ನೇ ಶತಮಾನದಲ್ಲಿ ಮಲೆನಾಡಹಳ್ಳಿ ಸ್ವಾಮೀಜಿ ಗಬ್ಬೂರು ಗುಹೆಗೆ ಬಂದುನೆಲೆಸಿದ್ದರು. ಗ್ರಾಮದ ಛಲವಾದಿ ಚನ್ನಮ್ಮರ ಸತ್ತಿದ್ದ ಎತ್ತನ್ನು ಪವಾಡ ಶಕ್ತಿಯಿಂದ ಬೂದಿಹಚ್ಚಿ ಬದುಕಿಸಿದ್ದಾರೆ. ಅಂದಿನಿಂದ ಶ್ರೀಗಳಿಗೆ ಬೂದಿಬಸವ ಎನ್ನುವ ಹೆಸರು ಬಂದಿದೆ. ೧೮ನೇ ಶತಮಾನದಲ್ಲಿ ಹೈದರಾಬಾದ್‌ನ ನಿಜಾಮ್ ಸಾಮ್ರಾಜ್ಯ ವಿಸ್ತರಣೆಗೆ ಗಬ್ಬೂರಿಗೆ ಬಂದಾಗ ಅಂದು ಜಾತ್ರೆ ನಡೆಯುತ್ತಿತ್ತು. ತೇರು ಎಳೆಯಲು ಮುಂದಾಗಿ ಆನೆ, ಒಂಟೆ, ಕುದುರೆ ಸೇರಿ ತನ್ನ ಸೈನಿಕರಿಂದ ತೇರು ಎಷ್ಟೇ ಎಳೆದರೂ ಮುಂದೆ ಬರಲಿಲ್ಲ. ಶ್ರೀಗಳು ಮಂತ್ರ ಶಕ್ತಿಯಿಂದ ಮಿಣಿ ಇಲ್ಲದೆ ತೇರು ಎಳೆದು ನಿಜಾಮಗೆ ನೀರುಣಿಸಿದ್ದರು. ಶರಣಾದ ನಿಜಾಮ ನನ್ನ ಕುದುರೆ ಒಂದು ದಿನದಲ್ಲಿ ಎಲ್ಲೆಲ್ಲಿ ಮೇಯುವುದೋ ಅಲ್ಲಿಯವರೆಗೆ ಜಮೀನು ಬಿಟ್ಟುಕೊಡುವುದಾಗಿ ಹೇಳಿದ್ದ. ಕುದುರೆ ೯೬ ಎಕರೆಯಲ್ಲಿ ಮೇಯಿದಿದ್ದು ಅದು ಅಂದಿನಿಂದ ಶ್ರೀಮಠದ ಸ್ವತ್ತಾಗಿದೆ. ಇಂದಿಗೂ ಆ ಜಮೀನಿಗೆ ತೇರು ಜಮೀನು ಎನ್ನುತ್ತಾರೆ.

ಬಾಕ್ಸ್=======
ಶ್ರೀಗಳಿಗೆ ರಜತ ಮಹೋತ್ಸವ
ಪೀಠಾಧಿಪತಿ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಪಟ್ಟಕ್ಕೇರಿ ಫೆ.೧೮ಕ್ಕೆ ೨೫ವರ್ಷ ಪೂರೈಸಲಿದೆ. ಈ ದಿನ ವಿಶೇಷವಾಗಿ ಆಚರಿಸಲು ಭಕ್ತರು ಮುಂದಾಗಿದ್ದಾರೆ. ಸ್ವಾಮೀಜಿ ಪಟ್ಟಾಧಿಕಾರಿವಹಿಸಿಕೊಂಡ ನಂತರ ಶ್ರೀಮಠದಲ್ಲಿ ದೈವಕಳೆ ದ್ವಿಗುಣಗೊಂಡಿದೆ. ಪ್ರಭಯ್ಯಸ್ವಾಮಿ ಮಹಾದೇವಮ್ಮ ದಂಪತಿ ಉದರದಲ್ಲಿ ಜನಿಸಿದ ಸ್ವಾಮೀಜಿ, ಗೆಜ್ಜೆಬಾವಿ ಶ್ರೀಕರಿಬಸವ ಶಿವಾಚಾರ್ಯ ಸ್ವಾಮೀಜಿ ಬಳಿ ಗುರುದೀಕ್ಷೆ ಪಡೆದಿದ್ದಾರೆ. ೧೯೯೯ ಜನವರಿ ೨೫ರಂದು ಶ್ರೀಮಠದ ೮ನೇ ಪೀಠಾಧಿಪತಿಯಾಗಿ ಬಂದ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಮಠವನ್ನು ಭಕ್ತರ ತಾಣವಾಗಿ ಮಾಡಿದ್ದಾರೆ. ದೇವಸ್ಥಾನಕ್ಕೆ ಗೋಪುರ ನಿರ್ಮಾಣ, ಮಠದ ಜೀರ್ಣೋದ್ಧಾರ ಮಾಡಿ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದಾರೆ. ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ. ೨೦೦೨ರಿಂದ ಸಾಮೂಹಿಕ ವಿವಾಹ ಆಯೋಜಿಸಿ ಭಕ್ತರ ಮನೆಗಳನ್ನು ಬೆಳಗುತ್ತಿದ್ದಾರೆ. ಇದುವರಿಗೆ ೨೨೩೭ ಜೋಡಿಗಳ ಸಾಮೂಹಿಕ ವಿವಾಹ ಮಾಡಿಸಿ ಬಡವರಿಗೆ ಸಹಾಯಹಸ್ತ ಚಾಚಿದ್ದಾರೆ. ಅಲ್ಲದೆ ಎಸ್ಸಿ, ಎಸ್ಟಿ, ಪ್ರವರ್ಗ ೧ ಸಮಾಜದ ದಂಪತಿಗಳಿಗೆ ಸರ್ಕಾರದಿಂದ ೫೦ಸಾವಿರ ರೂ., ಸಾಮಾನ್ಯ ವರ್ಗದ ಜೋಡಿಗಳಿಗೆ ೧೩ಸಾವಿರ ರೂ. ಸಹಾಯಧನ ಒದಗಿಸಿದ್ದಾರೆ. ಪ್ರತಿಅಮಾವಾಸ್ಯೆ ದಿನ ಮಾಸಿಕ ಶಿವಾನುಭವಗೋಷ್ಠಿ ಆಯೋಜಿಸಿ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ. ಗೋವು ರಕ್ಷಣೆ ದೃಷ್ಟಿಯಿಂದ ಶ್ರೀಮಠದಲ್ಲಿ ಗೋಶಾಲೆ ಆರಂಭಿಸಿ ೬೬ಗೋವುಗಳಿಗೆ ಆಶ್ರಯ ನೀಡಿದ್ದಾರೆ. ೨೦೦೨ರಲ್ಲಿ ಶ್ರೀಬೂದಿಬಸವೇಶ್ವರ ಟ್ರಸ್ಟ್ ಪ್ರಾರಂಭಿಸಿ ಸಾಮಾಜಿಕ ಸೇವೆಗೆ ಮುನ್ನುಡಿ ಬರೆದಿದ್ದಾರೆ. ಬಡವರ ಮಕ್ಕಳಿಗೆ ತ್ರಿವಿಧ ದಾಸೋಹ ನೀಡಲು ಶಾಲೆ ಪ್ರಾರಂಭಿಸಿದ್ದು ಅನ್ನ, ಅಕ್ಷರ, ಆಶ್ರಯ(ವಸತಿ) ನೀಡುತ್ತಿದ್ದು ೫೦೦ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಲು ಶ್ರೀಶಾಂತಮೂರ್ತಿ ನಾಟ್ಯ ಸಂಘ ಸ್ಥಾಪಿಸಿ ರಂಗಭೂಮಿ ಕಲೆ ಪ್ರೋತ್ಸಾಹಿಸುತ್ತಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ಇದುವರೆಗೆ ೧೦೦ಕ್ಕೂ ಹೆಚ್ಚು ನಾಟಕಗಳು ಪ್ರದರ್ಶನಗೊಂಡಿವೆ. ಅಲ್ಲದೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಂಗೀತ, ಹಾಸ್ಯ ಕಾರ್ಯಕ್ರಮ ಆಯೋಜಿಸಿ ಭಕ್ತರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ. ಇದಲ್ಲದೆ ಶ್ರೀಮಠಕ್ಕೆ ಬೇಡಿಬರುವ ಬಡವರ ಮದುವೆಗೆ ತಾಳಿ, ಮದುವೆ ಬಟ್ಟೆ, ಅನ್ನದಾಸೋಹ ನೀಡುವ ಮೂಲಕ ಭೂಮಿಗೆ ಬಂದ ಭಗವಂತನಂತೆ ಕಂಗೊಳಿಸುತ್ತಿದ್ದಾರೆ.

ಕೋಟ್=====
ಶ್ರೀ ಬೂದಿ ಬಸವೇಶ್ವರ ತಾಲೂಕಿನ ಆರಾಧ್ಯದೈವವಾಗಿದ್ದು, ನೂರಾರು ಪವಾಡ ಮಾಡಿದ್ದಾರೆ. ಇಂದಿಗೂ ಮಿಣಿ ಇಲ್ಲದೇ ತೇರು ಎಳೆಯಲಾಗುತ್ತಿದೆ. ಶ್ರೀ ಮಠ ಹಲವು ವರ್ಷಗಳಿಂದ ಸಮಾಜಸೇವೆ ಮಾಡುತ್ತಾ ಬಂದಿದ್ದು, ೨೨೩೭ ಜೋಡಿ ಮದುವೆ ಮಾಡಿಸಿದ್ದಾರೆ. ರಂಗಭೂಮಿ ಕಲೆ ಉಳಿಸಲು ನಾಟಕ ಪ್ರದರ್ಶನ, ಧಾರ್ಮಿಕ, ಸಂಗೀತ, ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಆಧ್ಯಾತ್ಮ ಬೋಧನೆ ಮೂಲಕ ಭಕ್ತರನ್ನು ಜ್ಞಾನದ ಬೆಳಕಿನಕಡೆ ಕರೆದೊಯ್ಯುತ್ತಿದ್ದಾರೆ.

| ರಾಜಶೇಖರ ಸಾಹುಕಾರ ನಾಗಡದಿನ್ನಿ
ಶ್ರೀಮಠದ ಭಕ್ತರು