
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ. 26 :- ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ರಾಜಕೀಯ ರಣತಂತ್ರ ಹೆಣೆಯಲಾಗಿದ್ದು ನಾಡಿದ್ದು ಕ್ಷೇತ್ರದ ಏಳು ಕಡೆ ಎಲ್ ಇ ಡಿ ಮತ್ತು ಯಾಪ್ ಮೂಲಕ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸದ್ಯದಲ್ಲೇ ವಿಡಿಯೋ ಸಂವಾದ ನಡೆಸಲಿದ್ದಾರೆ ಆಯಾ ಕ್ಷೇತ್ರದ ಬಿಜೆಪಿ ಗೆಲುವಿಗೆ ಶ್ರಮಿಸಲಿದ್ದಾರೆಂದು ಮಹಾರಾಷ್ಟದ ಬಿಜೆಪಿ ಪ್ರಮುಖ್ ಹಾಗೂ ವಿಜಯನಗರ ಜಿಲ್ಲಾ ಚುನಾವಣಾ ಪ್ರವಾಸಿ ಪ್ರಮುಖ್ ಪ್ರವೀಣ್ ಘುಗೆ ತಿಳಿಸಿದರು.
ಅವರು ಮಂಗಳವಾರ ಪಟ್ಟಣದ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಅವರ ನಿವಾಸದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಎರಡು ದಿನದ ಮಟ್ಟಿಗೆ ಕೂಡ್ಲಿಗಿ ಕ್ಷೇತ್ರವಾರು ಸುತ್ತಾಡಿ ಬಿಜೆಪಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವ ಬಗ್ಗೆ ತಿಳಿಸಲಾಗುವುದು. ಬಿಜೆಪಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ತಂತ್ರಗಳನ್ನು ಈಗಾಗಲೇ ಹೆಣೆಯಲಾಗಿದೆ. ರಾಷ್ಟ್ರ, ರಾಜ್ಯ, ಜಿಲ್ಲಾ ಸೇರಿ ಮಂಡಲದ ಪ್ರಮುಖರು ಪ್ರತಿ ತಾಲೂಕು ಕೇಂದ್ರಗಳಲ್ಲಿ ರೋಡ್ ಶೋ, ರ್ಯಾಲಿ, ಬುಧವಾರ ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರತಿಮೆಗಳಿಗೆ ಮಾಲಾರ್ಪಣೆ, ಸ್ವಾಮೀಜಿಗಳು, ಮಠಾಧೀಶರ ಭೇಟಿ ಕಾರ್ಯಕ್ರಮ ನಡೆಯಲಿದೆ.
ಮೇ 2 ರಂದು ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಕೂಡ್ಲಿಗಿ ಕ್ಷೇತ್ರದಿಂದ 50 ರಿಂದ 60 ಸಾವಿರಕ್ಕೂ ಅಧಿಕ ಜನರು ಮೋದಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಏ.27 ರಂದು ಮೋದಿ ಆಪ್ ಬಿಡುಗಡೆಯಾಗಲಿದ್ದು, ಮೋದಿಯವರು ಭಾಷಣ ಮಾಡುವುದನ್ನು ದೊಡ್ಡ ಸ್ಕ್ರೀನ್ ಗಳಲ್ಲಿ ಜನರಿಗೆ ತೋರಿಸಲಾಗುವುದು ಮತ್ತು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಕಾರ್ಯವೈಖರಿ ಬಗ್ಗೆ ತಿಳಿಸಲಾಗುವುದು.
ಮನಕೀ ಬಾತ್ ಗೆ ನೂರರ ಸಂಭ್ರಮ : ದೇಶದ ಪ್ರಧಾನಿ ತಿಂಗಳ ಕೊನೆ ಭಾನುವಾರ ನಡೆಸುವ ಮನಕೀ ಬಾತ್ ರೇಡಿಯೋ ಸಂವಾದ ಕಾರ್ಯಕ್ರಮ ನಾಳೆ 30ರ ದಿನಾಂಕದ ಕಾರ್ಯಕ್ರಮಕ್ಕೆ ನೂರರ ಸಂಭ್ರಮವಾಗಲಿದ್ದು ಈ ಸಂಭ್ರಮವನ್ನು ಕರ್ನಾಟಕ ರಾಜ್ಯದಲ್ಲಿ ಅದ್ದೂರಿಯಾಗಿ ನಡೆಸಿ ಮೋದಿಜಿಗೆ ಅಭಿನಂದನೆ ಸಲ್ಲಿಸಲಾಗುವುದು. ಎಂದರು.
ಪ್ರವೀಣ್ ಮಾತನಾಡಿ, ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಾಯಿ , ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ 150 ಸ್ಥಾನ ಗಳಿಸಿ ಬಿಜೆಪಿ ಸರಕಾರ ರಚಿಸಲಾಗುವುದು ಎಂದರು.
ಕೂಡ್ಲಿಗಿ ಕ್ಷೇತ್ರದ ಚುನಾವಣಾ ಉಸ್ತುವಾರಿ ವೀರೇಶ ಬಾತಿ, ಚೆನ್ನಪ್ಪ ಮಂಡಲ ಅಧ್ಯಕ್ಷರು ಕೂಡ್ಲಿಗಿ, ಬಿಜೆಪಿ ಅಭ್ಯರ್ಥಿ ಲೋಕೇಶ ನಾಯಕ ಆಪ್ತ ಡಾ ಲಿಂಗರಾಜು, ಮಾಧ್ಯಮ ಸಂಚಾಲಕ ಸುರೇಶ ಬಾಬುರಾವ್ , ಕಿರಣ್ ವಿಸ್ತಾರಕ, ಎ ಎಂ ವಾಗೀಶ ಮೂರ್ತಿ ಬಿಜೆಪಿ ಕೂಡ್ಲಿಗಿ ನಗರ ಪ್ರಧಾನ ಕಾರ್ಯದರ್ಶಿ, ಸಿದ್ದೇಶ ಶಶಿ ಸೇರಿದಂತೆ ಬಿಜೆಪಿಯ ಇತರರು ಉಪಸ್ಥಿತರಿದ್ದರು.