ಬೂತ್ ಮಟ್ಟದಲ್ಲಿ ಸಂಘಟಿಸಿ ಲೋಕಾ ಗೆಲ್ಲಿ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.09:- ಬೂತ್ ಮಟ್ಟದಿಂದಲೂ ಪಕ್ಷವನ್ನು ಸಂಘಟನೆ ಮಾಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಗುರುವಾರ ನಡೆದ ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲೆಯ ವಿಶೇಷ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಯೊಂದು ಬೂತ್‍ಗಳಲ್ಲಿ ಪಕ್ಷವನ್ನು ಸಂಘಟಿಸಿ, ಪಕ್ಷ ಬಲಪಡಿಸಬೇಕು. ಆ ಮೂಲಕ ಪ್ರತಿ ಬೂತ್‍ನಲ್ಲೂ ಪಕ್ಷದ ಅಭ್ಯರ್ಥಿಗೆ ಶೇ.51ಕ್ಕಿಂತ ಹೆಚ್ಚು ಮತಗಳು ಬರುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ಸನ್ನದ್ಧರಾಗಬೇಕು. ಪ್ರತಿಯೊಂದು ಜಾತಿಯ ಮತಗಳು ಸಹ ಬಿಜೆಪಿಗೆ ಬರುವಂತೆ ಕಾರ್ಯಯೋಜನೆ ರೂಪಿಸಬೇಕಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿರುವ ಕೊಡುಗೆ, ಜನಪರ ಯೋಜನೆಗಳ ಕುರಿತಂತೆ ಜನರಿಗೆ ತಿಳಿಸುವ ಕೆಲಸವನ್ನು ಇಂದಿನಿಂದಲೇ ಆರಂಭಿಸಬೇಕಿದೆ ಎಂದು ತಿಳಿಸಿದರು.
ಅಲ್ಲದೇ ಚುನಾವಣೆ ಸಲುವಾಗಿ ಎಲ್ಲ ಬೂತ್‍ಗಳಲ್ಲೂ ಗೋಡೆ ಬರಹ ಅಭಿಯಾನ ನಡೆಯುತ್ತಿದ್ದು, ಇದನ್ನು ಯಶಸ್ವಿಯಾಗಿ ನಡೆಸುವ ಜೊತೆಗೆ ಕರಪತ್ರಗಳನ್ನು ಹಂಚುವ ಮೂಲಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಬೇಕೆಂದು ಕರೆ ನೀಡಿದ ಅವರು, ರಾಜ್ಯದಲ್ಲಿ ಹೊಸದಾಗಿ ರಚನೆ ಮಾಡಿರುವ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಗಳು ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಮೈಸೂರಿನಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ ಎಂದರು.
ಕೇಂದ್ರದ ವಿರುದ್ಧ ಅನಗತ್ಯ ಆರೋಪ: ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಬಂದಿದ್ದರೂ, ರಾಜ್ಯದ ಕಾಂಗ್ರೆಸ್ ನಾಯಕರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಗಿಂತ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಹೆಚ್ಚು ಅನುದಾನ ಬಂದಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪ್ರತಿವರ್ಷ ಸರಾಸರಿ ಎಂಟು ಸಾವಿರ ಕೋಟಿ ಅನುದಾನ ನೀಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 21 ಸಾವಿರ ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹೀಗಿದ್ದರೂ ಕಾಂಗ್ರೆಸ್ ನಾಯಕರು ದಕ್ಷಿಣದ ರಾಜ್ಯಗಳಿಗೆ ತೆರಿಗೆ ಪಾಲು ನೀಡುವಾಗ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂಬ ಹಸಿ ಸುಳ್ಳಿನ ಆರೋಪ ಮಾಡುತ್ತಿದೆ. ಆ ಮೂಲಕ ಇಲ್ಲಸಲ್ಲದ ಆರೋಪ ಮಾಡುತ್ತಲೇ ಜನರನ್ನು ನಂಬಿಸಲು ಮುಂದಾಗಿದೆ. ಆದರೆ ಕಾಂಗ್ರೆಸ್ಸಿಗರ ಈ ಪ್ರಯತ್ನಕ್ಕೆ ಬಿಜೆಪಿ ನಾಯಕರು, ಕಾರ್ಯಕರ್ತರು ಅವಕಾಶ ನೀಡದೆ, ಕಾಂಗ್ರೆಸ್ ಮಾಡುತ್ತಿರುವ ಸುಳ್ಳಿನ ಆರೋಪಗಳ ಕುರಿತಂತೆ ಅಂಕಿಅಂಶಗಳ ಸಮೇತ ಜನರಿಗೆ ಮನವರಿಕೆ ಮಾಡಿಕೊಡುವ ಜೊತೆಗೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ಅಂಕಿಅಂಶಗಳ ಬಗ್ಗೆಯೂ ಜನರಿಗೆ ತಿಳಿಸಬೇಕಿದೆ ಎಂದು ಕರೆ ನೀಡಿದರು.
ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೌಟಿಲ್ಯ ರಘು ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯನ್ನು ಸದೃಢವಾಗಿ ಕಟ್ಟಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲಲಿದ್ದು, ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಸ್ವಾತಂತ್ರ್ಯ ನಂತರ ತತ್ವ ಸಿದ್ದಾಂತ ಮೈಗೂಡಿಸಿಕೊಳ್ಳುವ ಮೂಲಕ, ಪಕ್ಷ ಮತ್ತು ಪಕ್ಷದ ಕಾರ್ಯಕರ್ತರನ್ನು ಸದೃಢವಾಗಿ ಕಟ್ಟಿದ ಪರಿಣಾಮ ಇಂದು ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಮಹಮ್ಮದ್ ಘಜಿನಿ ಭಾರತದ ದೇವಾಲಯಗಳನ್ನು ಕೆಡವಿ, ದೇವಾಲಯಗಳನ್ನು ನಾಶ ಮಾಡಿದರೂ, ಇಲ್ಲಿ ಸಾಮ್ರಾಜ್ಯ ಸ್ಥಾಪಿಸಲು ಆಗಲಿಲ್ಲ. ಬಾಬರ್ ಆಜ್ಞೆಯಿಂದ ರಾಮಜನ್ಮಭೂಮಿ ಅಯೋಧ್ಯೆ ದೇವಾಲಯವನ್ನು ಕೆಡವಿ, ವಿರೂಪಗೊಳಿಸಿದರು. ಆದರೆ ಧರ್ಮಕ್ಕೆ ಆಪತ್ತು ಬಂದಾಗಲೆಲ್ಲ ಓರ್ವ ಪುರುಷೋತ್ತಮ ಜನ್ಮ ತಾಳುತ್ತಾನೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಎಲ್ಲ ಜನರ ಕನಸನ್ನು ನನಸು ಮಾಡಿದ್ದು, ಅವರಿಗೆ ಇರುವ ಔದಾರ್ಯತೆ, ಬದ್ಧತೆಯನ್ನು ನಾವೆಲ್ಲರೂ ಒಪ್ಪಬೇಕು ಎಂದರು.
ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಚಿವರಾದ ಎಂ. ಶಿವಣ್ಣ, ಸಿ.ಎಚ್. ವಿಜಯಶಂಕರ್, ಮಾಜಿ ಶಾಸಕ ಹರ್ಷವರ್ಧನ್, ಮಾಜಿ ಎಂಲ್ಸಿ ಸಿ.ರಮೇಶ್, ನಗರಾಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.