ಬೂತ್ ಮಟ್ಟದಲ್ಲಿ‘ಕೊರೋನಾ’ ಕಾರ್ಯಕರ್ತರ ಪಡೆ

ಪುತ್ತೂರು, ಮೇ ೨೮- ಕೊರೋನಾ ಮಹಾಮಾರಿಯ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮಾಂತರದ ಎಲ್ಲಾ ಬೂತ್‌ಮಟ್ಟದಲ್ಲಿ ಕಾರ್ಯಕರ್ತರ ತಂಡವನ್ನು ರೂಪಿಸಲಾಗಿದ್ದು, ಎಲ್ಲರಿಗೂ ಆರೋಗ್ಯ ಮತ್ತು ಅಹಾರ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿಳಿಸಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ತನಕ ಒಟ್ಟು ೧೮೦೨ ಕೊರೋನಾ ಪಾಸಿಟಿವ್ ವರದಿಯಾಗಿದ್ದು, ಈ ಪೈಕಿ ೫೦೦ ಕೇಸ್‌ಗಳು ಮಾತ್ರ ಸಕ್ರೀಯವಾಗಿದೆ. ಉಳಿದ ೧೩೦೨ ಕೇಸ್‌ಗಳು ಗುಣಮುಖರಾಗಿದ್ದಾರೆ. ೩೧ ಕೊರೊನಾ ಸೋಂಕಿತ ಮೃತರ ಅಂತಿಮ ಸಂಸ್ಕಾರವನ್ನು ಮಾಡಲಾಗಿದ್ದು, ಈ ಪೈಕಿ ೧೬ ನಗರಸಭಾ ಕೋವಿಡ್ ಕಾರ್ಯಪಡೆ ಹಾಗೂ ೧೫ ಮೃತ ದೇಹಗಳನ್ನು ಸೇವಾಭಾರತಿ ಸಂಘಟನೆಯ ಮೂಲಕ ಅಂತಿಮ ಸಂಸ್ಕಾರ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಕೊರೋನಾ ಕೇರ್ ಸೆಂಟರ್ ಜೊತೆಗೂ ನಿರಂತರ ಸಂಪರ್ಕವನ್ನು ಇರಿಸಲಾಗಿದ್ದು, ಇಲ್ಲಿರುವ ೪೪ ಕೋರೊನಾ ಸೋಂಕಿತರಿಗೆ ಅಗತ್ಯವಿದ್ದ ಸಲಹೆ ಸಹಕಾರಗಳನ್ನು ನೀಡಲಾಗುತ್ತಿದೆ. ಕೊರೋನಾ ಜೊತೆಗೆ ಇದೀಗ ಡೆಂಗ್ಯೂ ಪ್ರಕರಣವೂ ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ರೋಗಿಗಳಿಗೆ ರಕ್ತದಾನಕ್ಕಾಗಿ ೨ಸಾವಿರಕ್ಕೂ ಅಧಿಕ ದಾನಿಗಳ ಪಟ್ಟಿ ಮಾಡಿಟ್ಟುಕೊಳ್ಳಲಾಗಿದೆ. ಕೊರೋನಾ ೩ನೇ ಅಲೆಯ ಎದುರಿಸುವ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ. ೩ನೇ ಅಲೆ ಮಕ್ಕಳನ್ನು ಭಾದಿಸುವುದನ್ನು ತಡೆಯಲು ಮಕ್ಕಳ ತಜ್ಞ ವೈದ್ಯರ ಜೊತೆ ಸಭೆ ನಡೆಸಲಾಗಿದೆ ಎಂದು ರಾಧಾಕೃಷ್ಣ ಆಳ್ವ ಮಾಹಿತಿ ನೀಡಿದರು.
ಶಕುಂತಳಾ ಶೆಟ್ಟಿ ಹೇಳಿಕೆ ಹಾಸ್ಯಾಸ್ಪದ
ಸರ್ಕಾರವು ಬಡವರಿಗಾಗಿ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ವ್ಯವಸ್ಥೆ ಮಾಡುತ್ತಿದ್ದು, ಪುತ್ತೂರಿನ ಇಂದಿರಾ ಕ್ಯಾಂಟಿನ್‌ನಲ್ಲಿ ಕಳೆದ ಕೆಲ ದಿನಗಳಿಂದ ಆಹಾರದ ಕಟ್ಟುಗಳನ್ನು ಗೋಣಿಚೀಲದಲ್ಲಿ ತುಂಬಿಸಿಕೊಂಡು ಕೊಂಡೊಯ್ಯುತ್ತಿದ್ದಾರೆ ಎಂಬ ದೂರು ಬಂದಿತ್ತು. ಈ ಕುರಿತು ಶಾಸಕರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಒಬ್ಬರ ಹೆಸರಿನಲ್ಲಿ ೮ ಕಟ್ಟುಗಳಂತೆ ಹಲವು ಬಾರಿ ಕೊಂಡೊಯ್ದ ಕುರಿತು ದಾಖಲೆಯಲ್ಲಿತ್ತು. ಈ ಹಿನ್ನಲೆಯಲ್ಲಿ ನಗರಸಭೆಯ ಮಾರ್ಷಲ್‌ಗಳ ಮೂಲಕ ಅಲ್ಲಿಂದ ರವಾನೆಯಾಗುತ್ತಿರುವ ಪಾರ್ಸೆಲ್‌ಗಳನ್ನು ಪರಿಶೀಲನೆ ನಡೆಸಲಾಯಿತು. ಆ ಬಳಿಕ ೩೦೮ ಪಾರ್ಸೆಲ್ ಸಂಖ್ಯೆ ೧೦೮ಕ್ಕೆ ಇಳಿದಿತ್ತು. ಇದರಿಂದ ಪಾರ್ಸೆಲ್‌ನಲ್ಲಿ ಅವ್ಯವಹಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ನಗರಸಭಾ ಅಧ್ಯಕ್ಷ ಕೆ ಜೀವಂಧರ್ ಜೈನ್ ತಿಳಿಸಿದರು.
ಇಂದಿರಾ ಕ್ಯಾಂಟಿನ್ ಪಾರ್ಸೆಲ್ ಕುರಿತು ಮಾಹಿತಿ ಅರಿಯದೆ ಶಾಸಕ ಸಂಜೀವ ಮಠಂದೂರು ಅವರ ವಿರುದ್ದ ಹೇಳಿಕೆ ನೀಡಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಹೇಳಿಕೆಯು ಹಾಸ್ಯಾಸ್ಪದವಾಗಿದೆ ಎಂದ ಜೀವಂಧರ್ ಜೈನ್ ಅವರು ಶಾಸಕರ ಕಾಳಜಿ ಮತ್ತು ಜನಪ್ರಿಯತೆಯನ್ನು ಸಹಿಸದೆ ಮಾಜಿ ಶಾಸಕಿಯವರು ಶಾಸಕ ಸಂಜೀವ ಮಠಂದೂರು ಅವರನ್ನು ನಾಲಾಯಕ್ ಶಾಸಕ ಎಂದು ಹೇಳಿರುವುದು ಖಂಡನೀಯ. ಕೊರೊನಾ ಸಂಕಷ್ಟದ ವೇಳೆ ಕುತ್ತಾರ್‌ನಲ್ಲಿರುವ ತನ್ನ ಮನೆಯಲ್ಲಿ ಕುಳಿತಿರುವ ನಿಕಟಪೂರ್ವ ಶಾಸಕಿ ಅವರು ಓರ್ವ ಬಡವನಿಗೆ ಒಂದು ಕೆ.ಜಿ. ಅಕ್ಕಿಯನ್ನೂ ನೀಡದೆ ಇದೀಗ ಶಾಸಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ ಪೆರಿಯತ್ತೋಡಿ, ಜಯಶ್ರೀ ಉಪಸ್ಥಿತರಿದ್ದರು.