ಬೂಟ್ ಧರಿಸಿ ಧ್ವಜಾರೋಹಣ, ಸಿಓ ಅಮಾನತಿಗೆ ಆಗ್ರಹ

ಲಿಂಗಸೂಗೂರು,ಜ.೨೬:ಕಾಲಲ್ಲಿ ಬೂಟ್ ಧರಿಸಿದಂತೆಯೇ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧ್ವಜಾರೋಹಣವನ್ನು ಪುರಸಭೆ ಮುಖ್ಯಾಧಿಕಾರಿ ನೆರವೇರಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಇಂದು ಪಟ್ಟಣದಲ್ಲಿ ಜರುಗಿದೆ.
ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಪುರಸಭೆ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣ ಆಯೋಜಿಸಲಾಗಿತ್ತು. ಪುರಸಭೆ ಮುಖ್ಯಾಧಿಕಾರಿಯೇ ಧ್ವಜಾರೋಹಣ ನೆರವೇರಿಸಬೇಕಾಗಿತ್ತು. ಆದರೆ, ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಕಾಲಲ್ಲಿ ಬೂಟ್ ತೆರೆದು ಧ್ವಜಾರೋಹಣ ನೆರವೇರಿಸಬೇಕೆನ್ನುವ ಸೌಜನ್ಯವನ್ನು ಮರೆತೇ ಬಿಟ್ಟಿದ್ದರು. ಕಾಲಿನಲ್ಲಿ ಬೂಟ್ ಧರಿಸಿದಂತೆಯೇ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಅವರ ಬೂಟ್ ಧರಿಸಿದ್ದ ಕಾಲಿನ ಪಕ್ಕದಲ್ಲಿಯೇ ಮಹಾತ್ಮಗಾಂಧಿಜೀ ಹಾಗೂ ಅಂಬೇಡ್ಕರ್ ಭಾವಚಿತ್ರಗಳಿದ್ದರೂ ಅದನ್ನು ಅಧಿಕಾರಿ ಗಮನಿಸಿಯೇ ಇಲ್ಲ.
ಪುರಸಭೆ ಅಧಿಕಾರಿ ರಾಯರೆಡ್ಡಿ ಈ ವರ್ತನೆ ನೆರೆದಿದ್ದ ಜನರಲ್ಲಿ ಭಾರಿ ಆಕ್ರೋಶ ಉಂಟು ಮಾಡಿದ್ದು, ತಕ್ಷಣ ಅವರನ್ನು ಅಮಾನತು ಮಾಡಬೇಕೆಂದು ದಲಿತಪರ ಸಂಘಟನೆಗಳು ಆಗ್ರಹಿಸಿದ ಘಟನೆ ನಡೆಯಿತು.