ಬೂಕನಕೆರೆ-ಶೀಳನೆರೆ ಏತನೀರಾವರಿ ಯೋಜನೆ ಉದ್ಘಾಟನೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.12: ತಾಲ್ಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗಳ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಐಚನಹಳ್ಳಿ (ಕಟ್ಟಹಳ್ಳಿ) ಏತನೀರಾವರಿ ಮೊದಲನೇ ಹಂತದ 46 ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯನ್ನು ರಾಜ್ಯದ ಕೃಷಿ ಸಚಿವ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ಉದ್ಘಾಟನೆ ನೆರವೇರಿತು.
ನಂತರ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ ಅವರು ಏತ ನೀರಾವರಿ ಯೋಜನೆಯು ಸುಮಾರು 265 ಕೋಟಿ ರೂಗಳ ಅಂದಾಜು ವೆಚ್ಚದ ಕಾಮಗಾರಿಯಾಗಿದೆ. ಕೆಆರ್‍ಎಸ್ ಜಲಾಶಯದ ಮೇಲ್ಭಾಗದ ಕಟ್ಟೆಹಳ್ಳಿಯ ಸೇತುವೆ ಬಳಿಯಲ್ಲಿ ಹೇಮಾವತಿ ನದಿಯ ಬಳಿ ಜಾಕ್‍ವೆಲ್ ಮತ್ತು ಪಂಪ್‍ಹೌಸ್ ನಿರ್ಮಿಸಿ ಏತ ನೀರಾವರಿ ಮೂಲಕ ಮೂರು ಹಂತದಲ್ಲಿ 67.76 ಕ್ಯೂಸೆಕ್ ನೀರನ್ನು ಎತ್ತಿ ನೀರಿನ ಅಭಾವದಿಂದ ಕೂಡಿದ ಬೂಕನಕೆರೆ ಹಾಗೂ ಶೀಳನೆರೆ ಹೋಬಳಿಯ 89 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದ್ದು. ಒಂದನೇ ಹಂತದಲ್ಲಿ 46 ಕೆರೆ ಎರಡನೇ ಹಂತದಲ್ಲಿ 22, ಮೂರನೇ ಹಂತದಲ್ಲಿ 21 ನೀರು ತುಂಬಿಸುವ ಕಾಮಗಾರಿಯು ಮುಗಿದಿದೆ. ಈ ಯೋಜನೆಯಿಂದ ಸುತ್ತಮುತ್ತಲಿನ ಗ್ರಾಮಗಳ ಜನಜಾನುವಾರುಗಳಿಗೆ ನೀರು ಒದಗಿಸುವುದರ ಜೊತೆಗೆ ಅಂತರ್ಜಲ ಅಭಿವೃದ್ಧಿಗೊಳಿಸುವ ಉದ್ದೇಶವನ್ನು ಹೊಂದಿದೆ. ಒಂದು ಸರ್ಕಾರದ ಅವಧಿಯಲ್ಲಿ ಮುಗಿದಿದ್ದ ಕೆಲಸ ಮುಂದಿನ ಸರ್ಕಾರಗಳು ಅದನ್ನು ಕಾರ್ಯರೂಪಕ್ಕೆ ತರುವುದು ಸಹಜ ಪ್ರಕ್ರಿಯೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲಾ ಕಾಮಗಾರಿಗಳಿಗೂ ಓವರ್ ಎಸ್ಟಿಮೆಟ್ ಮಾಡಿದ ಪರಿಣಾಮ ರಾಜ್ಯದಲ್ಲಿರುವ ಗುತ್ತಿಗೆದಾರರಿಗೆ ಮೂರು ಸಾವಿರ ಕೋಟಿಗೂ ಅಧಿಕ ಹಣ ಹಂಚಿಕೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಬಿದ್ದಿದೆ. ಕಟ್ಟಹಳ್ಳಿ ಏತ ನೀರಾವರಿಯ ಕಾಮಗಾರಿಯನ್ನು ಪೂರ್ಣಗೊಳಿಸಲು ಇನ್ನೂ 30 ಕೋಟಿಗೂ ಅಧಿಕ ಹಣ ಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅನುದಾನ ಒದಗಿಸುವ ಕೆಲಸ ಮಾಡುತ್ತೇನೆ. ಈ ಯೋಜನೆಯ ಮುಖ್ಯ ರೂವಾರಿ ಮಾಜಿ ಸಚಿವ ನಾರಾಯಣಗೌಡರು ಅವರ ಆಸಕ್ತಿಯಿಂದ ಯೋಜನೆ ನೆರವೇರಿದೆ ಅವರಿಗೂ ನಾನು ಅಭಿನಂದನೆ ತಿಳಿಸಲು ಬಯಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಮಾತನಾಡಿ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಿ ಶೀಳನೆರೆ ಹೋಬಳಿಯ ಕರೆಕಟ್ಟೆಗಳಿಗೆ ನೀರುಣಿಸಲು 8-10 ಕೋಟಿ ಹಣದ ಅವಶ್ಯಕತೆ ಇದೆ. ಸಚಿವರು ಈ ಬಗ್ಗೆ ಆಸಕ್ತಿ ವಹಿಸಬೇಕು, ಶೀಳನೆರೆ ಹೋಬಳಿಯೂ ಸಹ ಬರಪೀಡಿತ ಹೋಬಳಿಯಾಗಿದ್ದು ಈ ಕೆರೆಗಳಿಗೂ ನೀರು ತುಂಬಿಸುವ ಕೆಲಸವನ್ನು ಮಾಡಿದರೆ ಆ ಭಾಗದ ರೈತರ ಬದುಕು ಕೂಡಾ ಹಸನಾಗುತ್ತದೆ. ಸಣ್ಣ ನೀರಾವರಿ ಇಲಾಖೆಯವರು ಸಂತೆಬಾಚಹಳ್ಳಿ ಹೋಬಳಿಯ ಒಡೆದು ಹೋದ ಕೆರೆಗಳನ್ನು ದುರಸ್ತಿಪಡಿಸಲು ಮನಸ್ಸು ಮಾಡಬೇಕು. ಸಂತೇಬಾಚಹಳ್ಳಿ ಸಮೀಪದ ಕೆರೆಕಟ್ಟೆಗಳು 2021 ರಲ್ಲಿ ಅತಿವೃಷ್ಟಿಯಿಂದಾಗಿ ಒಡೆದುಹೋಗಿದ್ದು ಅವುಗಳ ದುರಸ್ತಿಗಾಗಿ 8 ಕೋಟಿ ರೂಗಳು ಹಣಕಾಸಿನ ನೆರವು ಬೇಕಾಗಿದೆ. ನೀವು ಹಲವಾರು ಬಾರಿ ಕೆ.ಆರ್.ಪೇಟೆಗೆ ಆಗಮಿಸಿದಾಗ ಅಭಿವೃದ್ದಿಗೆ ತಾರತಮ್ಯ ಮಾಡದೇ ಅನುದಾನ ನೀಡುವುದಾಗಿ ಹೇಳೀದ್ದೀರಿ. ನಮ್ಮ ತಾಲ್ಲೂಕಿನ ಬಾಕಿ ಇರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸಕ್ಕೆ ಮುಂದಾಗಬೇಕು. ಮತ್ತು ಹೊಸಹೊಳಲು ಮೇಲ್ಗಾಲುವೆ ಕಾಮಗಾರಿಗೆ 18 ಕೋಟಿ ಅನುದಾನದ ಫೈಲ್ ಸರ್ಕಾರದ ಮಟ್ಟದಲ್ಲಿದ್ದು ಅದನ್ನು ಪೂರ್ಣಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಐಚನಹಳ್ಳಿ ಸಮೀಪವೇ ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಈ ಕಾಮಗಾರಿ ನೆರವೇರಿದ್ದರೂ ಐಚನಹಳ್ಳಿ ಕೆರೆಗೆ ಮಾತ್ರ ನೀರು ಪೂರೈಕೆಯಾಗುತ್ತಿಲ್ಲ. ಕೂಡಲೇ ನಮ್ಮ ಗ್ರಾಮದ ಕೆರೆಗೆ ನೀರು ತುಂಬಿಸಿಕೊಡಬೇಕು ಎಂಬ ಬೇಡಿಕೆಯನ್ನು ಗ್ರಾಮಸ್ಥರ ಪರವಾಗಿ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಸಚಿವ ಚಲುವರಾಯಸ್ವಾಮಿಯವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಂಜಿಗೆರೆ ಗ್ರಾ.ಪಂ.ಅಧ್ಯಕ್ಷ ಪರಮೇಶ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ನಾಗೇಂದ್ರಕುಮಾರ್,ಕೆಪಿಪಿಸಿ ಸದಸ್ಯ ಕಿಕ್ಕೇರಿ ಸುರೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು,ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್, ಡಿ ಪ್ರೇಂಕುಮಾರ್, ತಾ.ಪಂ.ಮಾಜಿಸದಸ್ಯ ಮೋಹನ್, ಇಇ ವಿನಾಯಕ ಹರೆಅಟ್ಟಿ, ಎಇಇ.ನಿರ್ಮಲೇಶ್, ಜೆಇ ಅಜರುದ್ದೀನ್, ಜವರಾಯಿಗೌಡ, ವಕೀಲರ ಸಂಘದ ಅಧ್ಯಕ್ಷ ರವಿಶಂಕರ್,ಸಚಿವರ ಆಪ್ತ ಸಹಾಯಕ ಚೇತನಾಮಹೇಶ್, ಶಾಸಕರ ಆಪ್ತ ಸಹಾಯಕ ಪ್ರತಾಪ್, ಸೇರಿದಂತೆ ಹಲವರಿದ್ದರು.