ಬುಲ್ಡೋಜರ್ ಹೇಳಿಕೆ ಸಿದ್ದು ನಕಾರ

ಬೆಂಗಳೂರು, ಜು. ೨೭- ಶ್ರೀರಾಮಸೇನೆ, ಭಜರಂಗದಳ, ಆರ್‌ಎಸ್‌ಎಸ್‌ನಂತಹ ಹಿಂದೂ ಸಂಘಟನೆಗಳ ಮೇಲೆ ಬುಲ್ಡೋಜರ್ ನುಗ್ಗಿಸಬೇಕು ಎಂದು ನಾನು ಕರೆ ಕೊಟ್ಟಿದ್ದೇನೆ ಎಂಬ ವರದಿಗಳು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸುಳ್ಳು ವರದಿಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ಹಂಚುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡುವುದಾಗಿಯೂ ಹೇಳಿರುವ ಅವರು, ಕೆಲ ಸಮಾಜ ವಿರೋಧಿ ಶಕ್ತಿಗಳು ತಮ್ಮ ವಿರುದ್ಧ ಬೇಕೆಂದೆ ತಮ್ಮ ಪರ ಅಪಪ್ರಚಾರ ನಡೆಸುತ್ತಿದ್ದಾರೆ ಎಂದಿದ್ದಾರೆ.
ವಿರೋಧ ಪಕ್ಷದವರು, ಅಲ್ಪಸಂಖ್ಯಾತರು, ಸೈದ್ಧಾಂತಿಕ ವಿರೋಧಿಗಳ ಮನೆ ಮೇಲೆ ಬುಲ್ಡೋಜರ್ ಹರಿಸುತ್ತೇನೆ ಎಂಬ ಹಿಂಸಾಚಾರ ಹೇಳಿಕೆಗಳು ತಪ್ಪು. ಇಂತಹ ಹೇಳಿಕೆಗಳಿಂದ ಪ್ರಚೋದನೆಗೀಡಾಗಿ ಇನ್ನೊಂದು ಗುಂಪಿನವರು ಶ್ರೀರಾಮಸೇನೆ, ಭಜರಂಗ ದಳದವ ಮೇಲೆ ಬುಲ್ಡೋಜರ್ ಹರಿಸುತ್ತೇನೆ ಎಂದ ಹೇಳುತ್ತಾರೆ. ಇದಕ್ಕೆ ಯಾರೂ ಅವಕಾಶ ನೀಡಬಾರದು ಎಂದಷ್ಟೆ ಹೇಳಿದ್ದು. ತಮ್ಮ ಮಾತನ್ನು ತಿರುಚಲಾಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.