ಬುಲಂದ್‌ಶಹರ್ ಅತ್ಯಾಚಾರ ಸಂತ್ರಸ್ತೆ ಸಾವು

ನವದೆಹಲಿ, ನ ೧೮- ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಜಹಾಂಗಿರಾಬಾದ್‌ನ ಅತ್ಯಾಚಾರ ಸಂತ್ರಸ್ತೆ ಯುವತಿ ನಿನ್ನೆ ರಾತ್ರಿ ದೆಹಲಿಯ ಸಪ್ಧರ್‌ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಅತ್ಯಾಚಾರ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಿಕೊಳ್ಳಲು ಯುವತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅತ್ಯಾಚಾರ ಆರೋಪಿಯ ಚಿಕ್ಕಪ್ಪ ಹಾಗೂ ಕುಟುಂಬ ಸದಸ್ಯರು ಯುವತಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಆಪಾದಿಸಿದ್ದಾರೆ. ಅತ್ಯಾಚಾರಿಯ ಚಿಕ್ಕಪ್ಪ ಸಂಜಯ್ ಮತ್ತು ಕುಟುಂಬದ ಇತರ ಸದಸ್ಯರು ತನಗೆ ಬೆಂಕಿ ಹಚ್ಚಿದ್ದಾಗಿ ಸಾವಿಗಿಂತ ಮುಂಚೆ ಯುವತಿ ದಾಖಲಿಸಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಂಜಯ್, ಪರ್ನಿ ಕಾಜಲ್ ಮತ್ತು ಇತರ ಐದು ಮಂದಿಯ ವಿರುದ್ಧ ಯುವತಿಯ ಕುಟುಂಬದವರು ಜಹಾಂಗಿರಾಬಾದ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ತೀವ್ರ ಒತ್ತಡದ ಬಳಿಕವೂ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಲು ಯುವತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿದರು ಎಂದು ಆಪಾದಿಸಲಾಗಿದೆ.
ಯುವತಿಯೇ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಮೊದಲು ಹೇಳಲಾಗಿತ್ತು. ಆದರೆ ಬಳಿಕ ಕುಟುಂಬದವರು ಸಂಜಯ್ ಮತ್ತು ಆತನ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬುಲಂದರ್‌ಶಹರ್ ಹಿರಿಯ ಪೊಲೀಸ್ ಅಧೀಕ್ಷಕ ಎಸ್.ಕೆ.ಸಿಂಗ್ ಹೇಳಿದ್ದಾರೆ.
ಗಸ್ತಿನಲ್ಲಿದ್ದ ಉಪನಿರೀಕ್ಷಕ ವಿನಯಕಾಂತ್ ಗೌತಮ್ ಮತ್ತು ಪೇದೆ ವಿಕ್ರಾಂತ್ ಥೋಮರ್ ಅವರನ್ನು ಪ್ರಕಟಣದ ಸಂಬಂಧ ಅಮಾನತುಪಡಿಸಲಾಗಿದೆ.