ಬುರ್ಖಾ ತೆರೆಯಲು ಹೇಳಿದ ಮಾಧವಿ ಲತಾ ವಿರುದ್ಧ ಕೇಸ್

ಹೈದರಾಬಾದ್: ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲಾಗಿದೆ.
ಮತದಾನದ ದಿನ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ತೆಗೆದು ವೋಟರ್ ಗುರುತಿನ ಚೀಟಿಯನ್ನ ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಪರಿಶೀಲಿಸಿದ್ದು ಭಾರೀ ವಿವಾದವಾಯಿತು.
ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಾಧವಿ ಲತಾ ಅವರು ನಿನ್ನೆ ಮತದಾನ ಕೇಂದ್ರದಲ್ಲಿ ಮುಸ್ಲಿಂ ಮಹಿಳೆಯರ ಬಳಿ ಹೋಗಿ ಬುರ್ಖಾ ತೆಗೆಯುವಂತೆ ಹೇಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ವಿವಾದ ಸೃಷ್ಟಿಸಿತ್ತು. ಜತೆಗೆ ಬುರ್ಖಾ ತೆಗೆಯುವಂತೆ ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ನೀವು ಎಷ್ಟು ವರ್ಷಗಳ ಹಿಂದೆ ಇದನ್ನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಜತೆಗೆ ಹೆಚ್ಚಿನ ಪರಿಶೀಲನೆಗಾಗಿ ಆಧಾರ್ ಕಾರ್ಡ್ ಕೂಡ ಕೊಡುವಂತೆ ಮನವಿ ಮಾಡಿದ್ದಾರೆ.
ಈ ದೃಶ್ಯ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಮಾಧವಿ ಲತಾ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಒಬ್ಬಳು ಅಭ್ಯರ್ಥಿಯಾಗಿದ್ದು, ಕಾನೂನಿನ ಪ್ರಕಾರ ಮುಖಕ್ಕೆ ಮಾಸ್ಕ್ ಇಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಇದೆ. ಮುಸ್ಲಿಂ ಮಹಿಳೆಯರ ಬಳಿ ತಮ್ಮ ಬುರ್ಖಾವನ್ನು ತೆಗೆಯುವಂತೆ ಕೇಳುವುದು ದೊಡ್ಡ ವಿಷಯವಲ್ಲ, ಏಕೆಂದರೆ ನಾನು ಪುರುಷ ಅಲ್ಲ, ತಾನೂ ಮಹಿಳೆಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ದಯವಿಟ್ಟು ನಾನು ಗುರುತಿನ ಚೀಟಿಗಳನ್ನು ನೋಡಿ ಮತ್ತು ಪರಿಶೀಲಿಸಬಹುದೇ ಎಂದು ತುಂಬಾ ವಿನಮ್ರತೆಯಿಂದ ಅವರಲ್ಲಿ ವಿನಂತಿಸಿದ್ದೇನೆ. ಆದರೆ ಯಾರಿಗಾದರೂ ಅದನ್ನು ದೊಡ್ಡ ಸಮಸ್ಯೆಯನ್ನು ಮಾಡಬೇಕು ಎಂದು ಬಯಸಿದರೆ, ಅವರಿಗೆ ಭಯವಿದೆ ಎಂದು ಅರ್ಥ ಅಂತಾ ಮಾಧವಿ ಲತಾ ತಿಳಿಸಿದ್ದಾರೆ. ಇತ್ತ ವೀಡಿಯೋ ವೈರಲ್ ಆಗುತ್ತಾ ವಿವಾದವಾಗುತ್ತಿದ್ದಂತೆಯೇ ಮಾಧವಿ ಲತಾ ವಿರುದ್ಧ ಮಲಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಧವಿ ಲತಾ ವಿರುದ್ಧ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳನ್ನು ತಿಳಿಸುವ ೨೯೫ಂ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಮಾಧವಿ ಲತಾ ಅವರು ಹೈದರಾಬಾದ್‌ನ ಹಾಲಿ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಹಿರಿಯ ಬಿಆರ್‌ಎಸ್ ನಾಯಕ ಗದ್ದಂ ಶ್ರೀನಿವಾಸ್ ಯಾದವ್ ವಿರುದ್ಧ ಕಣಕ್ಕಿಳಿದಿದ್ದಾರೆ.