ಬುಮ್ರಾ ಮಾರಕ ಬೌಲಿಂಗ್; 210 ರನ್ ಗಳಿಗೆ ದ.ಆಫ್ರಿಕಾ ಸರ್ವಪತನ, ಭಾರತ 70 ರನ್ ಮುನ್ನಡೆ

ಕೇಪ್ ಟೌನ್, ಜ.12-ಜಸ್ಪ್ರೀತ್ ಬಮ್ರಾ ಮಾರಕ ಬೌಲಿಂಗ್ ದಾಳಿಗೆ ದೂಳಿಪಟವಾದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 210 ರನ್ ಗಳಿಗೆ ಸರ್ವಪತನ ಕಂಡಿದೆ. ಹೀಗಾಗಿ ಭಾರತ 13 ರನ್ ಗಳ ಆಲ್ಪಮುನ್ನಡೆ ಸಾಧಿಸಿದೆ.
ಒಂದು ವಿಕೆಟ್ ನಷ್ಟಕ್ಕೆ17 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ಇಂದು ಎರಡನೇ ಆಟ ಮುಂದುವರಿಸಿತು. ಕೀಗನ್ ಪೀಟರ್ ಸನ್ ಏಕಾಂಗಿ ಹೋರಾಟ ನಡೆಸಿದರು. 72 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ಔಟಾದರು.
ಹರಿಣಗಳ ಪರ ಉತ್ತಮ ಜತೆಯಾಟ‌‌ ನಿಭಾಯಿಸುವಲ್ಲಿ ಬ್ಯಾಟರ್ ಗಳು ವಿಫಲರಾದರು. ಮಹಾರಾಜ್ 25, ಬವುಮಾ 28, ಡುಸೇನ್ 21 ಹಾಗೂ ರಬಾಡಾ 15 ರನ್ ಗಳಿಸಿದರು.
ಭಾರತದ ಪರ ಬುಮ್ರಾ 42 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಉಮೇಶ್ ಹಾಗೂ ಶಮಿ ತಲಾ ಎರಡು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್ .ರಾಹುಲ್ ಹಾಗೂ ಮಯಾಂಕ್ ಅಗರ್ ವಾಲ್ ಉತ್ತಮ‌ ಆಟವಾಡಲು ಮತ್ತೆ ಎಡವಿದರು. ರಾಹುಲ್ 10 ಹಾಗೂ ಮಯಾಂಕ್ ರನ್ ಗಳಿಸಿ ಔಟಾದರು.
ನಂತರ ಜತೆಗೂಡಿದ ನಾಯಕ‌ ಕೊಹ್ಲಿ ತಾಳ್ಮೆಯ ಆಟ ಪ್ರದರ್ಶಿಸಿದರು. ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ ಭಾರತ 57 ರನ್ ಗಳಿಸಿದೆ.‌ ಕೊಹ್ಲಿ 14 ಹಾಗೂ ಪೂಜಾರ 9 ರನ್ ಗಳಿಸಿ ಆಡುತ್ತಿದ್ದಾರೆ.
ಸರಣಿ ನಿರ್ಣಾಯಕ ಎನಿಸಿರುವ ಹಾಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ ಗೆಲ್ಲುವ ದೃಷ್ಟಿಯಿಂದ ಭಾರತ ಉತ್ತಮ ಮೊತ್ತ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ಈಗ ಪಂದ್ಯದಲ್ಲಿ ಒಟ್ಟು 70 ರನ್ ಮುನ್ನಡೆ ಗಳಿಸಿದೆ.
ಇನ್ನೂ ಮೂರು ದಿನದ ಆಟ ಬಾಕಿ‌ ಉಳಿದಿದ್ದು, ಈ ಪಂದ್ಯ ಅಪಾರ ಕುತೂಹಲ ಕೆರಳಿಸಿದೆ.