ಬುದ್ಧ ವಿಹಾರದಲ್ಲಿ ಬುದ್ಧ ಶಿಲಾ ಮೂರ್ತಿ ಪ್ರತಿಷ್ಠಾಪನೆ

ಕಲಬುರಗಿ,ಅ.28: ಇಂಡೋನೇಶಿಯಾದ ಬುದ್ಧನ ಅನುಯಾಯಿ ಆಗಿರುವ ಚಿತ್ರನಟ ಗಗನ್ ಮಲಿಕ್ ಅವರು ದೇಣಿಗೆಯಾಗಿ ಕೊಟ್ಟಿರುವ ಐದು ಅಡಿ ಎತ್ತರದ ಕುಳಿತ ಭಂಗಿಯಲ್ಲಿರುವ ಬುದ್ಧನ ಶಿಲಾ ಪ್ರತಿಮೆಯನ್ನು ಶನಿವಾರ ನಗರದ ಹೊರವಲಯದಲ್ಲಿರುವ ಬುದ್ಧ ವಿಹಾರದ ಸಭಾಂಗಣದಲ್ಲಿ ಸಾವಿರಾರು ಅನುಯಾಯಿಗಳ ಸಂಭ್ರಮದ ನಡುವೆ ಪ್ರತಿಷ್ಠಾಪನೆ ಜರುಗಿತು.
ಬೆಳಿಗ್ಗೆ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಘನ ಅಧ್ಯಕ್ಷತೆಯಲ್ಲಿ ಹಾಗೂ ಟ್ರಸ್ಟ್‍ನ ಹಾಲಿ ಚೇರಮನ್ ರಾಹುಲ್ ಎಂ. ಖರ್ಗೆ ಅವರ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನೆ ಅದ್ದೂರಿಯಿಂದ ಜರುಗಿತು. ಪ್ರತಿಷ್ಠಾಪನೆಗೂ ಮುನ್ನ ಬುದ್ಧ ವಿಹಾರದ ಮುಖ್ಯ ದ್ವಾರದಿಂದ ಸಭಾಂಗಣದವರೆಗೂ ಮೆರವಣಿಗೆ ಜರುಗಿತು.
ಕಾರ್ಯಕ್ರಮದಲ್ಲಿ ದೇಶ ಹಾಗೂ ವಿದೇಶಗಳಿಂದಲೂ ಬುದ್ಧ ಅನುಯಾಯಿಗಳು, ಅದರಲ್ಲಿ ಇಂಡೋನೇಶಿಯಾದಿಂದ ಯಾನಿ ಲಿಮ್, ಸಿದ್ದಾರ್ಥ ಹತ್ತಿಯಾಂಬರೆ, ಗಗನ್ ಮಲಿಕ್ ಸೇರಿದಂತೆ ಸುಮಾರು 30 ಜನರು, ಮಹಾರಾಷ್ಟ್ರ, ತೆಲಂಗಾಣ್, ಆಂಧ್ರಪ್ರದೇಶ್ ಸೇರಿದಂತೆ ಇತರೆ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿನ ಅನುಯಾಯಿಗಳು ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಪತ್ನಿ ಶ್ರೀಮತಿ ರಾಧಾಬಾಯಿ ಹಾಗೂ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
ಸಿದ್ಧಾರ್ಥ ವಿಹಾರದ ಟ್ರಸ್ಟ್‍ನ ಆಡಳಿತಾಧಿಕಾರಿಗಳೂ ಆಗಿರುವ ನಿವೃತ್ತ ಸಹಾಯಕ ಆಯುಕ್ತ ರಮೇಶ್ ಬೇಗಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಪಣ್ಣ ಗಂಜಗೇರಿ, ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಈಶ್ವರ್ ಸಂಗನ್ ಸೇರಿದಂತೆ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.