ಬುದ್ಧ, ಬಸವ, ಬಾಬಾಸಾಹೇಬ್ ಜಯಂತ್ಯುತ್ಸವ: ಈದ್ ಮಿಲಾಪ್

ಕಲಬುರಗಿ,ಏ.29: ನಗರದ ಜಗತ್ ವೃತ್ತದಲ್ಲಿನ ಬಸವೇಶ್ವರ್ ಪುತ್ಥಳಿಯ ಸಭಾಂಗಣದಲ್ಲಿ ಏಪ್ರಿಲ್ 30ರಂದು ಸಂಜೆ 5 ಗಂಟೆಗೆ ಬುದ್ಧ, ಬಸವ, ಬಾಬಾಸಾಹೇಬ್ ಜಯಂತ್ಯುತ್ಸವ ಮತ್ತು ಈದ್ ಮಿಲಾಪ್ ಸಂಕೀರ್ಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸೌಹಾರ್ದ ವೇದಿಕೆಯ ಪ್ರಮುಖ ಪ್ರೊ. ಪ್ರಭು ಖಾನಾಪೂರೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ಹಾಗೂ ಕೆಬಿಎನ್ ವಿಶ್ವವಿದ್ಯಾಲಯದ ಪ್ರೊ. ಹಮೀದ್ ಅಕ್ಬರ್ ಅವರು ವಿಶೇಷ ಉಪನ್ಯಾಸ ನೀಡುವರು ಎಂದರು.
ಸಮನ್ವಯಕಾರರಾದ ಮಕ್ತಂಪೂರ್ ಗದ್ದುಗೆಮಠದ ಚರಲಿಂಗ ಮಹಾಸ್ವಾಮಿಗಳು, ಬುದ್ಧವಿಹಾರದ ಸಂಗಾನಂದ್ ಭಂತೇಜಿ, ಸೇಂಟ್ ಮೇರಿ ಚರ್ಚ್‍ನ ಫಾದರ್ ಸÁ್ಟ್ಲ್ಯನ್ಲಿ, ಮಳಖೇಡದ ಸೈಯದ್ ಶಾ ಮುಸ್ತಫಾ ಖಾದ್ರಿ, ಗುರುದ್ವಾರದ ದೀಪಸಿಂಗ್ ಸರ್ದಾರ್‍ಜಿ ಅವರು ಆಗಮಿಸುವರು ಎಂದು ಅವರು ಹೇಳಿದರು.
ಯೋಗಾಯೋಗ ಎಂಬಂತೆ ಈ ಬಾರಿ ಏಪ್ರಿಲ್ 22ರಂದು ರಂಜಾನ್, 23ರಂದು ಬಸವ ಜಯಂತಿ ಏಕಕಾಲಕ್ಕೆ ಬಂದಿದೆ. ಏಪ್ರಿಲ್ 14ರಂದು ಬಾಬಾಸಾಹೇಬ್‍ರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಮೇ 5ರಂದು ಬೌದ್ಧ ಪೂರ್ಣಿಮೆ. ಅಂದರೆ ಹೆಚ್ಚು ಕಡಿಮೆ ತಿಂಗಳೊಪ್ಪತ್ತಿನಲ್ಲಿಯೇ ಈ ಸಂತರ ನೆನಪಿನ ದಿನಗಳು ಮುಖಾಮುಖಿಯಾಗಿವೆ. ಹಾಗೆ ನೋಡಿದರೆ ನಮ್ಮ ಜನಪದರು ಈ ಮುಂಚಿನಿಂದಲೂ ರಂಜಾನ್, ಬಸವ ಜಯಂತಿ, ಬಾಬಾಸಾಹೇಬರ ಜಯಂತಿಗಳನ್ನು ಎಲ್ಲರೂ ಆಚರಿಸಿಕೊಂಡು ಬರುತ್ತಿದ್ದಾರೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ರಾಜಕೀಯ ದುರುದ್ದೇಶಗಳಿಗೆ ಬಲಿಯಾಗಿ ಎಲ್ಲರೂ ತಮ್ಮ, ತಮ್ಮ ಧರ್ಮ ಮತ್ತು ಜಾತಿಗಳಲ್ಲಿ ಹುದುಗಿಕೊಂಡು ಒಂಟಿಯಾಗುತ್ತಿದ್ದಾರೆ. ಧರ್ಮ ನಿರಪೇಕ್ಷಿತ, ಜಾತ್ಯಾತೀತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇದು ಮಾರಕವಾಗುತ್ತಿದೆ. ಆದ್ದರಿಂದ ಎಲ್ಲ ಬಾಂಧವರು ಸೇರಿ ಸಮನ್ವಯ ಪರಂಪರೆಯನ್ನು ಖಾಯಂಗೊಳಿಸಲು ಇಂತಹ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕವ್ವಾಲಿ, ವಚನ, ತತ್ವಪದ ಮತ್ತು ಕ್ರಾಂತಿಗೀತೆಗಳ ನಾದ ಝೇಂಕಾರದೊಂದಿಗೆ ಶಿರ್ ಕುರಮಾ ಯಾನೇ ಸುರಕುಂಭಾದ ಸ್ವಾದ ಸವಿಯಲು ಬನ್ನಿ. ಇದು ಸೌಹಾರ್ದತೆಯ ಭಾವ ಬಂಧದ ಮಾನವೀಯ ರಸಬಳ್ಳಿಯ ಸಮಾರಂಭ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ. ಮೀನಾಕ್ಷಿ ಬಾಳಿ, ಪ್ರೊ. ಕಾಶಿನಾಥ್ ಅಂಬಲಗೆ, ದತ್ತಾತ್ರೇಯ್ ಇಕ್ಕಳಕಿ, ಪಾಂಡುರಂಗ ಮಾವಿನಕರ್ ಮುಂತಾದವರು ಉಪಸ್ಥಿತರಿದ್ದರು.